ಜೂ.26 : ಪುತ್ತೂರಲ್ಲಿ ಅಂಚೆ ಕಾರ್ಡ್ ಅಭಿಯಾನ
ಪುತ್ತೂರು, ಜೂ. 21: ಕಳೆದ ಕೆಲವು ವರ್ಷಗಳಲ್ಲಿ ಚುನಾವಣೆಗೆ ಬಳಸಲಾದ ಮತಯಂತ್ರದ ಬಗ್ಗೆ ಸಂಶಯ ವ್ಯಕ್ತವಾಗಿರುವುದರಿಂದ ಸಂಶಯಕ್ಕೆ ಕಾರಣವಾದ ಇವಿಎಂ ಮತಯಂತ್ರವನ್ನು ಬಹಿಷ್ಕರಿಸಿ ಮತಮತ್ರದ ಮೂಲಕವೇ ಚುನಾವಣೆ ನಡೆಸುವಂತೆ ಆಗ್ರಹಿಸಿ ಜೂ.26ರಂದು ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಅಂಚೆ ಕಾರ್ಡ್ ಅಭಿಯಾನ ನಡೆಸಲು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ.
ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಂದ ಫಲಿತಾಂಶದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಇವಿಎಂ ಮತಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಈ ಸಂಶಯವನ್ನು ಇನ್ನುಷ್ಟು ಹೆಚ್ಚಿಸಿದೆ. ಮತದಾನ ನಮ್ಮ ಹಕ್ಕು ಆಗಿದ್ದರೂ ನಾವು ಹಾಕಿದ ಮತ ನಮ್ಮ ಪಕ್ಷಕ್ಕೆ ಸೇರುತ್ತಿದೆಯೋ ಎಂಬ ಸಂಶಯ ಬರುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿದೆ. ಭಾರತದ ಪ್ರಜೆಯ ಸಂವಿಧಾನದ ಹಕ್ಕಿನ ಬಗ್ಗೆ ಸಂಶಯ ಬಂದಾಗ ನಮ್ಮ ಹಕ್ಕಿನ ರಕ್ಷಣೆ ಮಾಡಬೇಕಾದುದು ಸುಪ್ರೀಂ ಕೋರ್ಟಿನ ಕರ್ತವ್ಯ. ನಮ್ಮ ಸಂವಿಧಾನದ ಹಕ್ಕನ್ನು ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರಶ್ನಿಸುವ ಹಾಗೂ ಬೇಡಿಕೆ ಇಡುವ ಹಕ್ಕು ಇದ್ದು, ಇದರಂತೆ ಜೂ.26ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಂಚೆ ಕಾರ್ಡ್ ಅಭಿಯಾನದ ಮೂಲಕ ಈ ಮತಯಂತ್ರವನ್ನು ಬಹಿಷ್ಕರಿಸಿ ಮುಂದೆ ಮತಪತ್ರದ ಮೂಲಕವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ಆಗ್ರಹಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ.
ಪುತ್ತೂರು ಬ್ಲಾಕ್‌ನಲ್ಲಿ ನಡೆಯುವ ಈ ಅಭಿಯಾನದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮೊದಲಾದ ನಾಯಕರು ಭಾಗವಹಿಸುವರು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಅವರು ತಿಳಿಸಿದ್ದಾರೆ.