ಮಂಗಳೂರಿಗೆ ನಾಲ್ಕು ಟೈಗರ್ ಟೋವಿಂಗ್ ವಾಹನ: ಡಿಸಿಪಿ ಹನುಮಂತರಾಯ

Update: 2018-06-22 10:45 GMT

ಮಂಗಳೂರು, ಜೂ.22: ನಗರದ ರಸ್ತೆಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ ಹೋಗುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲ ಕಲ್ಪಿಸಲು ಶೀಘ್ರದಲ್ಲೇ ಮಂಗಳೂರಿಗೆ ನಾಲ್ಕು ಟೈಗರ್ ಟೋವಿಂಗ್ ವಾಹನಗಳು ಬರಲಿವೆ ಎಂದು ಡಿಸಿಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 80ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರೊಂದಕ್ಕೆ ಸಂಬಂಧಿಸಿ ಡಿಸಿಪಿ ಪ್ರತಿಕ್ರಿಯಿಸಿದರು.

ಟೈಗರ್ ಟೋವಿಂಗ್ ವಾಹನಗಳು ಬಂದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಟೋವಿಂಗ್ ವಾಹನದ ಕುರಿತು ಈಗಾಗಲೇ ಎರಡು-ಮೂರು ಬಾರಿ ಟೆಂಡರ್ ಕರೆಯಲಾಗಿದ್ದರೂ ಅದಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಇದೀಗ ಹೊಸದಾಗಿ ಮಂಗಳೂರಿಗೆ ಟೈಗರ್ ಟೋವಿಂಗ್ ವಾಹನದ ವ್ಯವಸ್ಥೆ ಕಲ್ಪಿಸಲು ಆದೇಶವಾಗಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅವರು ವಿವರಿಸಿದರು.

‘ಪಿವಿಎಸ್‌ನಿಂದ ಬಂಟ್ಸ್ ಹಾಸ್ಟೆಲ್‌ವರೆಗೆ ರಸ್ತೆಯಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ’ ಪಿವಿಎಸ್‌ನ ವಿನಾಯಕ ಎಂಬವರು ಮನವಿ ಮಾಡಿದರು.

ಕದ್ರಿ ವ್ಯಾಪ್ತಿಯ ರೆಸ್ಟೊರೆಂಟ್‌ವೊಂದರ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಶೈಲೇಶ್ ಎಂಬವರು ದೂರಿದರು.

ಈ ಎರಡು ಅಹವಾಲಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ರಸ್ತೆ ಬದಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಕೇಸು ದಾಖಲಿಸಲು ಸಂಚಾರ ಪೊಲೀಸರಿಗೆ ಸೂಚಿಸಿದರು.

ಪೆರಾರ ಕೈಕಂಬ ಮಾರ್ಗವಾಗಿ ಕಳೆದ ನಾಲ್ಕು ದಿನಗಳಿಂದ ಖಾಸಗಿ ಬಸ್(ಪಿಟಿಸಿ 22 ನಂ.ಬಸ್) ಸಂಚಾರ ನಡೆಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಅದೇರೀತಿ ಇಲ್ಲಿ ಶಾಲಾ-ಕಾಲೇಜುಗಳಿದ್ದು, ಕೆಲವು ವಾಹನಗಳ ಹೆಚ್ಚಿನ ಡೆಸಿಬಲ್‌ನ ಸದ್ದು ಉಂಟು ಮಾಡುವುದರಿಂದ ಸಮಸ್ಯೆ ಉದ್ಭವಿಸುತ್ತಿವೆ ಎಂದು ಪೆರಾರ ಕೈಕಂಬದಿಂದ ಕರೆ ಮಾಡಿದ ಜಗದೀಶ್ ಎಂಬವರು ದೂರಿದರು.

ಇದಕ್ಕೆ ಸ್ಪಂದಿಸಿದ ಡಿಸಿಪಿ, ಬಸ್ ಬಾರದಿರುವ ಕುರಿತಂತೆ ಆರ್‌ಟಿಒಗೆ ಮಾಹಿತಿ ನೀಡಲಾಗುವುದು. ವಾಣಿಜ್ಯ ಪ್ರದೇಶದಲ್ಲಿ 60 ಡೆಸಿಬಲ್, ಜನವಸತಿಯ ಪ್ರದೇಶದಲ್ಲಿ 55 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದಮಾಲಿನ್ಯವಾಗದಂತೆ ಈಗಾಗಲೇ ಎಚ್ಚರಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರೊಳಗಿನ ಸಮಯದಲ್ಲಿ ವಾಹನ ಚಾಲಕರು ಶಬ್ದಮಾಲಿನ್ಯ ಉಂಟು ಮಾಡಿದ್ದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಕ್ಕೂರು ಜಂಕ್ಷನ್‌ನಲ್ಲಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಿಕ್ಷಣ ಸಂಸ್ಥೆಗಳಿವೆ. ಆದರೆ ಈ ಪ್ರದೇಶದಲ್ಲಿ ರಸ್ತೆಯಲ್ಲಿ ಹಂಪ್ಸ್ ಇಲ್ಲದಿರುವುದರಿಂದ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಾಜ ಎಂಬವರು ಮನವಿ ಮಾಡಿದರು.

ಬಸ್‌ನಲ್ಲಿ ಮಕ್ಕಳನ್ನು ಹತ್ತಿಸುವಾಗ-ಇಳಿಸುವಾಗಲೇ ಬಸ್ ನಿರ್ವಾಹಕ ಸೀಟಿ ಊದುತ್ತಾರೆ. ಪರಿಣಾಮ ಬಸ್ ಮುಂದೆ ಚಲಿಸುತ್ತದೆ. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಸುಭಾಷ್ ನಗರದ ಶೋಭಾ ನಾಯ್ಕ್ ಎಂಬವರು ದೂರಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ, ಆರ್‌ಟಿಒ ಅಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಬಳಿ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ರಸ್ತೆಗಳ ಬದಿಯಲ್ಲಿ ಮಣ್ಣು ಗುಡ್ಡೆ ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ ಎಂದು ಕೊಣಾಜೆಯ ಹಸನಬ್ಬ ಎಂಬವರು ದೂರಿದರು.

ಡಿಸಿಪಿ ಹನುಂತರಾಯ ಮಾತನಾಡಿ, ಪಂಪ್‌ವೆಲ್-ತೊಕ್ಕೊಟ್ಟು ಫ್ಲೈಓವರ್ ಬಗ್ಗೆ ಈಗಾಗಲೇ ಸಭೆ ನಡೆಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆ ಕಂಪೆನಿಗಳು ನೀಡಿವೆ ಎಂದರು.

ಬೈಂದೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೈಂದೂರಿನಿಂದ ರವಿರಾಜ ಎಂಬವರು ಕರೆ ಮಾಡಿ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಡಿಸಿಪಿ, ಬೈಂದೂರು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರಲಿದ್ದು, ಈ ಕುರಿತು ಅಲ್ಲಿನ ಎಸ್ಪಿ ನಿಂಬರಗಿ ಅವರಿಗೆ ಮಾಹಿತಿ ನೀಡಲಾಗುವುದು ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಕೊಟ್ಟಾರಚೌಕಿ, ಹೊನ್ನಕಟ್ಟೆ, ಕುಳಾಯಿ, ಕಂಕನಾಡಿ, ಕುಲಶೇಖರ, ಹಂಪನಕಟ್ಟೆ, ಕುಡುಪು, ಪಡೀಲು, ಮಂಗಳಾದೇವಿ ಪ್ರದೇಶಗಳಿಂದ ಬಸ್ ಬಾರದಿರುವುದು, ರಸ್ತೆ, ಸಂಚಾರ, ಸೋಲಾರ್‌ದೀಪ ಸಮಸ್ಯೆ ಸೇರಿದಂತೆ ಒಟ್ಟು 18 ದೂರುಗಳು ಸ್ವೀಕರಿಸಲ್ಪಟ್ಟವು.

ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಚಾರ ಎಸಿಪಿ ಮಂಜುನಾಥ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಪಿ.ಯೋಗೇಶ್ವರ್, ಸುನೀಲ್‌ಕುಮಾರ್ ಎಚ್.ಟಿ., ತಿಮ್ಮರಾಜು, ಪುರುಷೋತ್ತಮ್ ಬಿ. ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News