ತನ್ನ ಮಗುವಿಗೆ ಪ್ರೀತಿಯ ತಮ್ಮ ಜುನೈದ್ ಹೆಸರಿಟ್ಟ ಸೋದರಿ

Update: 2018-06-22 10:58 GMT

ಹೊಸದಿಲ್ಲಿ, ಜೂ.22: ಕಳೆದ ವರ್ಷದ ಜೂನ್ 22ರಂದು ಮಥುರಾಗೆ ಹೊರಟಿದ್ದ ರೈಲೊಂದರಲ್ಲಿ ದುಷ್ಕರ್ಮಿಗಳ ಗುಂಪೊಂದು ಇರಿದು ಕೊಲೆಗೈದ 15 ವರ್ಷದ ಜುನೈದ್ ಖಾನ್ ಅವರ ಸೋದರಿ ತನ್ನ ಪುತ್ರನಿಗೆ ಪ್ರೀತಿಯ ಸ್ಮರಣಾರ್ಥ ಜುನೈದ್ ಎಂದು ನಾಮಕರಣ ಮಾಡಿದ್ದಾಳೆ.

‘‘ಜುನೈದ್ ಖಾನ್ ಸಾವಿಗೀಡಾದ ಮೂರು ತಿಂಗಳ ನಂತರ ಹುಟ್ಟಿರುವ ನನ್ನ ಮಗು ತನ್ನ ಮಾವ ಜುನೈದ್ ನಂತೆಯೇ ಕಾಣುತ್ತಾನೆ. ಆದರೆ ಸ್ವಲ್ಪ ಸಪೂರಗಿದ್ದಾನೆ. ಜುನೈದ್ ನನ್ನ ಅಚ್ಚುಮೆಚ್ಚಿನ ತಮ್ಮನಾಗಿದ್ದ. ಆತನ ಹೆಸರನ್ನೇ ನನ್ನ ಮಗನಿಗೆ ಇಡಲು ನಿರ್ಧರಿಸಿದೆ’’ ಎಂದು ಫರೀದಾಬಾದ್ ನ ಖಂಡವ್ಲಿ ಗ್ರಾಮದ ತನ್ನ ಹೆತ್ತವರ ಮನಯೆಲ್ಲಿರುವ ಜುನೈದ್ ಸಹೋದರಿ ರಬಿಯಾ ಹೇಳುತ್ತಾಳೆ.

ಜುನೈದ್ ಸಾವಿಗೀಡಾಗಿ ವರ್ಷವೊಂದು ಕಳೆದಿದ್ದರೂ ಕುಟುಂಬದ ನೋವು ಇನ್ನೂ ಮಾಸಿಲ್ಲ. ಜುನೈದ್ ತಾಯಿ ಸಾಯಿರಾ ದುಃಖದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಜಲಾಲುದ್ದೀನ್ ಈಗಾಗಲೇ 25 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಆ ದಿನ ಜುನೈದ್ ಜತೆ ದಾಳಿಗೊಳಗಾಗಿದ್ದ ಆತನ ಸೋದರ ಶಾಕಿರ್ ಇನ್ನೂ ತನ್ನ ಒಂದು ಕೈಯನ್ನು ಎತ್ತಲು ಕಷ್ಟಪಡುತ್ತಿದ್ದಾನೆ. ಇತರ ನಾಲ್ಕು ಸೋದರರಾದ ಫೈಝಲ್, ಆದಿಲ್, ಹಾಶಿಂ ಮತ್ತು ಖಾಸಿಂ ಲೋಕಲ್ ರೈಲುಗಳಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಶಾಕಿರ್ ಮತ್ತು ಖಾಸಿಂ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿರುವುದರಿಂದ ಕುಟುಂಬ ಇನ್ನೂ ಭಯ ಪಡುತ್ತಿದೆ.

ಕಳೆದೊಂದು ವರ್ಷದಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಅವರ ಮನೆಯೆದುರು ಕಾವಲು ಕಾಯುತ್ತಿದ್ದಾರೆ. ಆದರೂ ಕುಟುಂಬದ ಯಾರಾದರೂ ಸದಸ್ಯರು ಹೊರ ಹೋದಾಗ ಜಲಾಲುದ್ದೀನ್ ಗೆ ಅವ್ಯಕ್ತ ಭಯ ಕಾಡುತ್ತದೆ. ಮಕ್ಕಳಿಗೆ ಯಾರ ಜತೆಗೂ ರೈಲಿನಲ್ಲಿ ಮಾತನಾಡದಂತೆ ಅವರು ಹೇಳಿದ್ದಾರೆ. ಅವರು ಹೊರಹೋದಾಗ ಪ್ರತಿ 30 ನಿಮಿಷಕ್ಕೊಮ್ಮೆ ಕರೆ ಮಾಡಿ ವಿಚಾರಿಸುತ್ತಾರೆ.

ಕಳೆದ ವರ್ಷ ಈದ್ ಗೆ ಮುಂಚೆ ಜುನೈದ್ ಹತ್ಯೆ ನಡೆದಿದ್ದರಿಂದ ಮತ್ತೆ ಈದ್ ಆಚರಿಸಲು ತನಗೆ ಸಾಧ್ಯವೇ ಇಲ್ಲ ಎಂದು ಜುನೈದ್ ತಾಯಿ ಸಾಯಿರಾ ಹಾಸಿಗೆಯಲ್ಲಿ ನರಳುತ್ತಲೇ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News