ವರ್ಗಾವಣೆಗೊಂಡ ಅಚ್ಚುಮೆಚ್ಚಿನ ಶಿಕ್ಷಕನನ್ನು ಸುತ್ತುವರಿದು ಕಣ್ಣೀರಿಟ್ಟ ವಿದ್ಯಾರ್ಥಿಗಳು

Update: 2018-06-22 10:59 GMT

ಚೆನ್ನೈ, ಜೂ.22: ಇಲ್ಲಿಗೆ ಸಮೀಪದ ತಿರುವಳ್ಳೂರು ಎಂಬಲ್ಲಿನ ವೆಲಿಯಗರಂ ಸರಕಾರಿ ಹೈಸ್ಕೂಲಿನ ಇಂಗ್ಲಿಷ್ ಶಿಕ್ಷಕರಾಗಿದ್ದ  28 ವರ್ಷದ ಜಿ ಭಗವಾನ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇತ್ತೀಚೆಗೆ ಅವರು ವರ್ಗಾವಣೆಗೊಂಡಿದ್ದು, ವಿದ್ಯಾರ್ಥಿಗಳು ಅಳುತ್ತಾ ಪ್ರೀತಿಯ ಶಿಕ್ಷಕನಿಗೆ ದಿಗ್ಬಂಧನ ವಿಧಿಸಿ ಅವರ ಸ್ಕೂಟರ್ ಕೀ ಹಾಗೂ ಚೀಲವನ್ನು ಸೆಳೆದು ಶಾಲೆ ಬಿಟ್ಟು ತೆರಳದಂತೆ ಅಂಗಲಾಚಿದ ಹೃದಯಸ್ಪರ್ಶಿ ಘಟನೆ ನಡೆದಿದೆ. 

ವಿದ್ಯಾರ್ಥಿಗಳು ತಮ್ಮ ಮೇಲಿರಿಸಿದ ಅಪಾರ ಪ್ರೀತಿಯಿಂದ ಗದ್ಗದಿತರಾದ ಶಿಕ್ಷಕ ಭಗವಾನ್ ತಮಗೆ ಈ ಶಾಲೆಯಲ್ಲಿ ಸೇವೆಗೈದಿದ್ದಕ್ಕೆ ವೇತನ ಮಾತ್ರವಲ್ಲದೆ ವಿದ್ಯಾರ್ಥಿಗಳ ಪ್ರೀತಿ ಕೂಡ ದೊರಕಿದೆ ಎಂದಿದ್ದಾರೆ. ಇದೀಗ ಇಲಾಖೆ ಅವರ ವರ್ಗಾವಣೆಯನ್ನು ಹತ್ತು ದಿನಗಳ ಕಾಲ ಮುಂದೂಡಿದೆ.

ನಿಯಮಗಳಂತೆ ಶಿಕ್ಷಣ ಇಲಾಖೆ ಭಗವಾನ್ ಸೇರಿದಂತೆ ಇಬ್ಬರು ಶಿಕ್ಷಕರನ್ನು ವರ್ಗಗೊಳಿಸಿತ್ತು. ವರ್ಗಾವಣೆಗೊಂಡ ಇನ್ನೊಬ್ಬ ಶಿಕ್ಷಕ ಬುಧವಾರ ಶಾಲೆಗೆ ಬಂದು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ತಮ್ಮ ಹೊಸ ಶಾಲೆಗೆ ತೆರಳಿದರೆ, ಭಗವಾನ್ ಕೂಡ ಹೋಗಬೇಕೆನ್ನುವಾಗ ಸುಮಾರು 100 ಮಕ್ಕಳು ಅವರನ್ನು ತಡೆದಿದ್ದರು. ಭಗವಾನ್ ಅವರು ಈ ಶಾಲೆಯಲ್ಲಿ ಆರನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರು ಶಾಲೆಯ ಅತ್ಯುತ್ತಮ ಶಿಕ್ಷಕರಾಗಿದ್ದರು ಎಂದು ಪ್ರಾಂಶುಪಾಲ ಅರವಿಂದಂ ಹೇಳುತ್ತಾರೆ.

ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿಯುವಂತೆ ಶಾಲೆಯ ಶಿಕ್ಷಕ-ರಕ್ಷಕ ಸಂಘ ಸ್ಥಳೀಯ ಸಂಸದ ಪಿ ಎಂ ನರಸಿಂಹನ್ ಅವರಿಗೆ ಮನವಿ ಮಾಡಿದರೂ ಇದು ನಿಯಮಿತ ಪ್ರಕ್ರಿಯೆಯಾಗಿರುವುದರಿಂದ ತಡೆಯಲು ಸಾಧ್ಯಿವಿಲ್ಲವೆಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News