ಶಾಲೆಯ ವಾಶ್ ರೂಂನಲ್ಲಿ 9ನೆ ತರಗತಿಯ ವಿದ್ಯಾರ್ಥಿಯ ಇರಿದು ಹತ್ಯೆ

Update: 2018-06-22 14:44 GMT

ವಡೋದರ, ಜೂ.22: ಇಲ್ಲಿನ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯ ಬುಡಕಟ್ಟು ಸಮುದಾಯದ ವಿದ್ಯಾರ್ಥಿಯನ್ನು ಶಾಲಾ ಶೌಚಾಲಯದ ಒಳಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ಸಂಭವಿಸಿದೆ. ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಆ್ಯಂಬ್ಯುಲೆನ್ಸ್ ಬರುವುದಕ್ಕೂ ಮುನ್ನ ಕೊನೆಯುಸಿರೆಳೆದಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ, ವಿದ್ಯಾರ್ಥಿಯ ತಲೆಗೆ ಹರಿತವಾದ ಆಯುಧದಿಂದ ಹೊಡೆಯಲಾಗಿದ್ದು ಕುತ್ತಿಗೆ ಸೀಳಲಾಗಿದೆ ಮತ್ತು ಹೊಟ್ಟೆಗೆ ಮೂರು ಬಾರಿ ಚೂರಿಯಿಂದ ಇರಿಯಲಾಗಿದೆ ಎಂದು ತಿಳಿದುಬಂದಿದೆ ಎಂದು ವರದಿ ತಿಳಿಸಿದೆ. ಪೊಲೀಸರಿಗೆ ಶಾಲೆಯ ಟೆರೆಸ್ ಮೇಲೆ ಚೀಲವೊಂದು ಸಿಕ್ಕಿದ್ದು ಅದರಲ್ಲಿ ವಿವಿಧ ಹರಿತವಾದ ಆಯುಧಗಳು ಹಾಗೂ ನೀರು ಮಿಶ್ರಿತ ಮೆಣಸಿನ ಹುಡಿಯಿರುವುದು ಕಂಡುಬಂದಿದೆ. ಆರೋಪಿಯು ಈ ಚೀಲವನ್ನು ಸ್ಥಳದಿಂದ ಪರಾರಿಯಾಗುವ ವೇಳೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.

ಈ ಚೀಲವು ಅದೇ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗೆ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಶಾಲೆಯ ಮೊದಲ ಮಹಡಿಯಲ್ಲಿರುವ ಶೌಚಾಲಯದ ಬಳಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ಆರೋಪಿ ಯಾರೆಂದು ಸ್ಪಷ್ಟಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ವಿದ್ಯಾರ್ಥಿಯ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ. ಸದ್ಯ ಸಿಕ್ಕಿರುವ ಚೀಲದ ಮಾಲಕ ಈ ಪ್ರಕರಣದಲ್ಲಿ ಪ್ರಮುಖ ಸಂಶಯಿತನಾಗಿದ್ದಾನೆ. ಆದರೆ ಇದೊಂದು ಪೂರ್ವ ಯೋಜಿತ ಕೊಲೆಯಂತೆ ಕಾಣುತ್ತಿದ್ದು ಹಲವು ವಿದ್ಯಾರ್ಥಿಗಳು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News