ಐದು ವರ್ಷಗಳಲ್ಲಿ ಮಲೇರಿಯಾ ಸಾವು ಸಂಭವಿಸಿಲ್ಲ: ಡಾ. ಪ್ರೇಮಾನಂದ

Update: 2018-06-22 13:13 GMT

ಉಡುಪಿ, ಜೂ.22: ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕಳೆದ ಐದು ವರ್ಷಗಳಿಂದ ಮಲೇರಿಯಾ ಕಾಯಿಲೆ ಯಿಂದ ಯಾರು ಕೂಡ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ ಎಂದು ಉಡುಪಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರೇಮಾನಂದ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ, ಲಯನ್ಸ್ ಕ್ಲಬ್ ಉಡುಪಿ- ಕರಾವಳಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣ ಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಮಲೇರಿಯಾ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

2014ರಲ್ಲಿ ರಕ್ತ ಪರೀಕ್ಷಿಸಿದ 1,71,571 ಮಂದಿಯಲ್ಲಿ 1,639 (ಪ್ಲಾಸ್ಮೋಡಿಯಂ ವೈವ್ಯಾಕ್ಸ್-1516, ಫ್ಲಾಸಿಪಾರಮ್-123), 2015ರಲ್ಲಿ ರಕ್ತ ಪರೀಕ್ಷಿಸಿದ 2,25,332ರಲ್ಲಿ 1366 (ಪಿವಿ-1153, ಪಿಎಫ್- 213), 2016ರಲ್ಲಿ ರಕ್ತ ಪರೀಕ್ಷಿಸಿದ 2,42,252ರಲ್ಲಿ 1168 (ಪಿವಿ-1022, ಪಿಎಫ್- 146), 2017ರಲ್ಲಿ ರಕ್ತ ಪರೀಕ್ಷಿಸಿದ 1,96,499 ಮಂದಿಯಲ್ಲಿ 513 (ಪಿವಿ-421, ಪಿಎಫ್- 92), 2018ರಲ್ಲಿ ಜೂನ್ ತಿಂಗಳವರೆಗೆ 62 ಮಂದಿಯಲ್ಲಿ ಮಲೇರಿಯಾ ಪ್ರಕರಣಗಳು ಕಂಡುಬಂದಿವೆ ಎಂದರು.

ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಶೇ.70ರಷ್ಟು ಮಲೇರಿಯಾ ಪ್ರಕರಣಗಳು ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಕಂಡು ಬರುತ್ತಿವೆ. ಇದರಲ್ಲಿ ದ.ಕ. ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ವರದಿಯಾ ಗುತ್ತಿವೆ. ಜಿಲ್ಲೆಯ ಮಲೇರಿಯಾ ಪ್ರಕರಣಗಳು ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿ ಸ್ಥಳೀಯ ಸಮಸ್ಯೆಯಾಗಿ ಪರಿಣಮಿಸಿದೆ. ಮುಖ್ಯವಾಗಿ ಮಲ್ಪೆ ಬಂದರು ಪ್ರದೇಶ, ನಗರದ ತೆಂಕಪೇಟೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಠಾರ ದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.

ಜಿಲ್ಲೆಯ ಮಲೇರಿಯಾ ಪ್ರಕರಣಗಳು ಹೆಚ್ಚಾಗಿ ವಲಸೆ ಕಾರ್ಮಿಕರಲ್ಲಿ ಕಂಡು ಬರುತ್ತಿದ್ದು, 2016ರಿಂದ ಹೊಸ ಕಾರ್ಯಕ್ರಮದ ಮೂಲಕ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಕಂದಾಯ ಗ್ರಾಮವಾರು ವಿಂಗಡಿಸಿ ಹೆಚ್ಚಿನ ಪ್ರಕರಣಗಳು ಕಂಡುಬರುವಲ್ಲಿ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸ ಮಾಡಲಾಗುತ್ತಿದೆ. 2025ರಲ್ಲಿ ರಾಷ್ಟ್ರೀಯ, 2022ರಲ್ಲಿ ರಾಜ್ಯ ಹಾಗೂ 2020ರಲ್ಲಿ ಉಡುಪಿ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಸ್ವಯಂ ಪ್ರೇರಿತರಾಗಿ ಜನರ ಮನಸ್ಥಿತಿ ಬದಲಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಬೇಕು. ಆಗ ಮಾತ್ರ ಮಲೇರಿಯಾದಂತಹ ಕಾಯಿಲೆ ಗಳನ್ನು ನಿಯಂತ್ರಿಸಲು ಸಾಧ್ಯ. ಸ್ವಚ್ಛ ಭಾರತ ನಿರ್ಮಾಣದ ಉದ್ದೇಶ ಪರಿ ಣಾಮಕಾರಿಯಾಗಿ ಅನುಷ್ಠಾಗೊಳ್ಳಬೇಕು ಎಂದು ತಿಳಿಸಿದರು.

ಮಲೇರಿಯಾ ಜಾಗೃತಿ ಕುರಿತು ಕರಪತ್ರವನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಪ್ರಭಾರ ಜಿಲ್ಲಾ ಆರೋಗ್ಯ ಮತುತಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮ ರಾವ್, ಹರೀಶ್ ಪೂಜಾರಿ, ಡಾ.ನೇರಿ ಕರ್ನೆಲಿಯೋ, ಸ್ವಪ್ನಾ ಸುರೇಶ್, ಪಿ.ಎ.ಭಟ್ ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಕ ದೇವಪ್ಪ ಪಟಗಾರ್ ವಂದಿಸಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪಕಾರ್ಯಕ್ರಮ ನಿರೂಪಿಸಿದರು. ಮಲೇರಿಯಾ ವಿರೋಧಿ ದಿನದ ಅಂಗವಾಗಿ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಎಂಜಿಎಂ ಕಾಲೇಜುವರೆಗೆ ಜಾಥಾ ನಡೆಯಿತು.

ಕೋಟೇಶ್ವರದಲ್ಲಿ 13 ಪ್ರಕರಣಗಳು ಪತ್ತೆ

ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳ 20ರವರೆಗೆ ಒಟ್ಟು 18 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದು, ಕೋಟೇಶ್ವರದ ಕಟ್ಟಡ ಕಾಮಗಾರಿ ಪ್ರದೇಶ ವೊಂದರಲ್ಲೇ 13 ಪ್ರಕರಣಗಳು ಪತ್ತೆಯಾಗಿವೆ. ಇದನ್ನು ಆರೋಗ್ಯ ಇಲಾಖೆ ಯೇ ಪತ್ತೆ ಹಚ್ಚಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಇವರೆಲ್ಲ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಉತ್ತರ ಕರ್ನಾಟಕದ ಹಾವೇರಿ, ಬಾಗಲಕೋಟೆಯ ಜಿಲ್ಲೆಯ ಕಾರ್ಮಿಕರಾಗಿದ್ದಾರೆಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರೇಮಾನಂದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News