ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛ ಅಭಿಯಾನ
ಉಡುಪಿ, ಜೂ.22: ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ವತಿ ಯಿಂದ ಮೇ 25ರಿಂದ ಜೂ.24ರವರೆಗೆ ಹಮ್ಮಿಕೊಳ್ಳಲಾದ ಸ್ವಚ್ಛ ರೈಲು ಅಭಿಯಾನದ ಪ್ರಯುಕ್ತ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣವನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮ ಶುಕ್ರವಾರ ಜರಗಿತು.
ಕಾರವಾರ ರೀಜನಲ್ ಸಿಗ್ನಲ್ ಆ್ಯಂಡ್ ಟೆಲಿ ಕಮ್ಯುನಿಕೇಶನ್ ಇಂಜಿನಿ ಯರ್ ಸಂತೋಷ್ ಸಿತುರ್ಕರ್ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣದ ಸಿಬ್ಬಂದಿಗಳು, ರಿಕ್ಷಾ ಹಾಗೂ ಟ್ಯಾಕ್ಸಿ ಮಾಲಕ ಮತ್ತು ಚಾಲಕರು ಸೇರಿದಂತೆ ಸುಮಾರು 100 ಮಂದಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ, ಹಳಿ, ಕಚೇರಿ, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ಕೊಂಕಣ ರೈಲ್ವೆಯ ಆದೇಶದಂತೆ ಜಿಲ್ಲೆಯ ನಂದಿಕೂರು, ಪಡುಬಿದ್ರೆ, ಉಡುಪಿ, ಬಾರಕೂರು, ಕುಂದಾಪುರ, ಬಿಜೂರು, ಸೇನಾಪುರ, ಬೈಂದೂರು, ಶಿರೂರು ರೈಲ್ವೆ ನಿಲ್ದಾಣಗಳಲ್ಲಿ ಈ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಾಗು ತ್ತಿದೆ. ಅದೇ ರೀತಿ ನಿಲ್ದಾಣಕ್ಕೆ ಆಗಮಿಸುವ ರೈಲುಗಳನ್ನು ಕೂಡ ಸ್ವಚ್ಛಗೊಳಿ ಸಲಾಗುತ್ತದೆ. ಅಲ್ಲದೆ ಇದರ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.