×
Ad

ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ: ಸುಬ್ರಹ್ಮಣ್ಯ ಭಟ್

Update: 2018-06-22 18:52 IST

ಬಂಟ್ವಾಳ, ಜೂ. 22: ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ಇದುವರೆಗೆ ಯಾವುದೇ ಪರಿಹಾರ ದೊರಕಿಲ್ಲ ಎಂದು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಭೂದಾಖಲೆ ಸಮರ್ಪಕ ಆಗಿರುವ ಮುಳುಗಡೆ ಭೂಮಿಯ ರೈತರಿಗೆ ಪರಿಹಾರ ದೊರೆತಿದೆ. ಒಟ್ಟು 17 ಕೋಟಿ ರೂ. ಪರಿಹಾರ ನೀಡುವ ಉದ್ದೇಶಕ್ಕೆ ಮನಪಾಕ್ಕೆ ಹಣ ಮಂಜೂರಾಗಿದೆ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಜೂ. 12ರಂದು ಲಿಖಿತ ಹೇಳಿಕೆಯನ್ನು ನೀಡಿ, ಸಂತ್ರಸ್ತ ರೈತರ ಸರಿಯಾದ ಪಟ್ಟಿಯನ್ನು ತಯಾರಿಸಿಲ್ಲ. ಸಮಿತಿಯು ಪ್ರತಿನಿಧಿ ಗಳಿಗೆ ಸಂತ್ರಸ್ತರ ಮನವಿ ನೀಡಿ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದು, ಇದರಲ್ಲಿ ಯಾರೊಬ್ಬರ ದಾರಿ ತಪ್ಪಿಸುವ ಉದ್ದೇಶ, ಇರಾದೆ ಇಲ್ಲ ಎಂದು ಹೇಳಿದ್ದಾರೆ.

ಹೋರಾಟ ಸಮಿತಿಯ ಕಾರ್ಯದರ್ಶಿ ಎನ್.ಕೆ.ಇದಿನಬ್ಬ ಮಾತನಾಡಿ, 2017 ಡಿ. 28ರಂದು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಮನಪಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ರೈತರಿಗೆ 6 ಮೀ. ನೀರು ಸಂಗ್ರಹಿಸಿದಾಗ ಮುಳುಗಡೆಯಾದ ಜಮೀನಿಗೆ ಶೀಘ್ರವಾಗಿ ನ್ಯಾಯೋಚಿತ ಪರಿಹಾರ ಹಾಗೂ ನೆಲ ಬಾಡಿಗೆ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ನೂತನ ಡ್ಯಾಂನಲ್ಲಿ ನೀರು ಸಂಗ್ರಹಿಸಿ 6 ತಿಂಗಳಾದರೂ ರೈತರಿಗೆ ಪರಿಹಾರ ದೊರೆತಿಲ್ಲ ಎಂದು ದೂರಿದ್ದಾರೆ.

5ಮೀ. ನೀರು ಸಂಗ್ರಹಿಸಿದಾಗ ಮುಳುಗಡೆಯಾದ ಎಲ್ಲ ರೈತರಿಗೆ ನೆಲಬಾಡಿಗೆ ಹಾಗೂ ನ್ಯಾಯೋಚಿತ ಪರಿಹಾರ ಈ ತನಕ ದೊರೆತಿಲ್ಲ. ಸಂತ್ರಸ್ತ ರೈತರ ಪಟ್ಟಿಯಲ್ಲಿ ಹಲವಾರು ರೈತರ ಹೆಸರು ಬಿಟ್ಟು ಹೋಗಿದ್ದರೂ ಈ ತನಕ ಸಂತ್ರಸ್ತ ರೈತರ ಪಟ್ಟಿ ಸರಿಪಡಿಸಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜನ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ರೈತರಿಗಾದ ಮೋಸವನ್ನು ಸರಿಪಡಿಸುವಂತೆ ಲಿಖಿತ ಮನವಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಇನ್ನಾದರೂ ತುಂಬೆ ಡ್ಯಾಂ ಸಂತ್ರಸ್ತರ 14 ವರ್ಷದ ಸಮಸ್ಯೆ ಪರಿಹರಿಸಿ ರೈತರ ಹಿತಾಶಕ್ತಿ ಕಾಪಾಡುವಂತೆ, ಪದಾಧಿಕಾರಿಗಳಾದ ಸುದೇಶ ಮಯ್ಯ, ಅಬ್ದುಲ್ ರಹಿಮಾನ್, ರಾಬರ್ಟ್ ಡಿಸೋಜಾ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಎನ್.ಮನೋಹರ್ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News