ಸೆಶೆಲ್ಸ್‌ನಲ್ಲಿ ಭಾರತದ ಸೇನಾನೆಲೆ ನಿರ್ಮಾಣಕ್ಕೆ ತಡೆ
ಹೊಸದಿಲ್ಲಿ, ಜೂ. 22: ದ್ವೀಪರಾಷ್ಟ್ರವಾದ ಸೆಶೆಲ್ಸ್‌ನಲ್ಲಿ ನೌಕಾಪಡೆ ನೆಲೆ ನಿರ್ಮಿಸುವ ಭಾರತದ ಮಹತ್ವಾಕಾಂಕ್ಷೆಗೆ ಭಾರೀ ಹಿನ್ನಡೆಯುಂಟಾಗಿದೆ. ಆಸಂಪ್ಶನ್ ದ್ವೀಪದಲ್ಲಿ ನೌಕಾಪಡೆಯ ನೆಲೆಯನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ನೀಡುವ ಒಪ್ಪಂದವನ್ನು ತಮ್ಮ ದೇಶದ ಸಂಸತ್ ಅಂಗೀಕರಿಸುವುದಿಲ್ಲವೆಂದು ಸೆಶೆಲ್ಸ್‌ನ ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಸೆಶೆಲ್ಸ್‌ನ ದುರ್ಗಮ ಅಸಂಪ್ಶನ್ ದ್ವೀಪದಲ್ಲಿ ಭಾರತವು ಮಿಲಿಟರಿ ನೆಲೆಯನ್ನು ನಿರ್ಮಿಸುವ ಒಪ್ಪಂದಕ್ಕೆ ಉಭಯದೇಶಗಳು ಕಳೆದ ಜನವರಿಯಲ್ಲಿ ಸಹಿಹಾಕಿದ್ದವು. ಆದರೆ ಅದಕ್ಕೆ ಹಿಂದೂಮಹಾಸಾಗರದ ಈ ಪುಟ್ಟ ದ್ವೀಪರಾಷ್ಟ್ರದ ಪ್ರತಿಪಕ್ಷ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ, ಸಾರ್ವಜನಿಕರೂ ಪ್ರತಿಭಟನೆ ನಡೆಸಿದ್ದರು. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವಕ್ಕೆ ತಡೆಯೊಡ್ಡುವ ಪ್ರಯತ್ನವಾಗಿ ಭಾರತವು ಆಸಂಪ್ಶನ್ ದ್ವೀಪದಲ್ಲಿ ನೌಕಾನೆಲೆ ನಿರ್ಮಿಸುವ 20 ವರ್ಷಗಳ ಒಪ್ಪಂದವನ್ನು ಸೆಶೆಲ್ಸ್ ಜೊತೆ ಏರ್ಪಡಿಸಿಕೊಂಡಿತ್ತು.
ಹಡಗು ಸಂಚಾರ ದಟ್ಟಣೆಯ ಸಮುದ್ರ ಮಾರ್ಗದ ಸಮೀಪವೇಇರುವ ಅಸಂಪ್ಶನ್ ದ್ವೀಪದಲ್ಲಿ ನೌಕಾನೆಲೆ ಸ್ಥಾಪಿಸಲು ಭಾರತಕ್ಕೆ ಅನುಮತಿ ನೀಡುವುದರಿಂದ, ಒಂದು ಪ್ರಾಂತವನ್ನು ಇನ್ನೊಂದು ದೇಶಕ್ಕೆ ಒಪ್ಪಿಸಿದಂತಾಗುತ್ತದೆ ಮತ್ತು ನೌಕಾನೆಲೆಯನ್ನು ಉಭಯದೇಶಗಳು ಜಂಟಿಯಾಗಿ ನಿರ್ವಹಿಸುವುದರಿಂದ 115 ದ್ವೀಪಗಳನ್ನೊಳಗೊಂಡ ಈ ದೇಶದ ಸಾರ್ವಭೌಮತೆಯನ್ನು ಕಡೆಗಣಿಸಿದಂತಾಗುತ್ತದೆಯೆಂದು ಸೆಶೆಲ್ಸ್‌ನ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಸೇನಾನೆಲೆಯನ್ನು ಸ್ಥಾಪಿಸುವುದಕ್ಕೆ ಭಾರತಕ್ಕೆ ಅನುಮತಿ ನೀಡುವ ಒಪ್ಪಂದಕ್ಕೆ ತಮ್ಮ ಅಂಗೀಕಾರವಿಲ್ಲವೆಂದು ಪ್ರತಿಪಕ್ಷ ಸದಸ್ಯರು ಈಗಾಗಲೇ ಹೇಳಿರುವುದರಿಂದ, ಆ ಒಡಂಬಡಿಕೆಯನ್ನು ರಾಷ್ಟ್ರೀಯ ಅಸೆಂಬ್ಲಿ (ಸಂಸತ್)ಯಲ್ಲಿ ಸರಕಾರ ಮಂಡಿಸುವುದಿಲ್ಲವೆಂದು ಸೆಶೆಲ್ಸ್‌ನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಬ್ಯಾರಿ ಫ್ಯಾಯೂರ್, ರಾಯ್ಟರ್ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸೆಶೆಲ್ಸ್ ಅಧ್ಯಕ್ಷ ಡ್ಯಾನಿ ಫ್ಯಾಯೂರ್ ಅವರು ರವಿವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿರುವ ಎರಡು ದಿನಗಳ ಮುನ್ನ ಬ್ಯಾರಿಫ್ಯಾಯೂರ್ ಈ ಹೇಳಿಕೆ ನೀಡಿದ್ದಾರೆ.
ಆದರೆ ಸೆಶೆಲ್ಸ್ ಅಧ್ಯಕ್ಷ ಡ್ಯಾನಿ ಫ್ಯಾಯೂರ್ ಅವರು, ಭಾರತ ಪ್ರವಾಸಕ್ಕೆ ಮುನ್ನ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಅಸಂಪ್ಶನ್ ದ್ವೀಪದಲ್ಲಿ ಸೇನಾನೆಲೆ ಸ್ಥಾಪಿಸುವ ವಿಚಾರದ ಬಗ್ಗೆ ತಾನು ಭಾರತ ಪ್ರವಾಸದ ವೇಳೆ ಮೋದಿ ಜೊತೆ ಚರ್ಚಿಸುವುದಿಲ್ಲ ಮತ್ತು ಆ ಯೋಜನೆಯು ಮುಂದುವರಿಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದರು. ಮುಂದಿನ ವರ್ಷ ಮಂಡಿಸಲಿರುವ ಬಜೆಟ್‌ನಲ್ಲಿ ಅಸಂಪ್ಶನ್ ದ್ವೀಪದಲ್ಲಿ ಸೆಶೆಲ್ಸ್‌ನ ತಟರಕ್ಷಣಾ ಪಡೆಗಳಿಗಾಗಿ ನೌಕಾನೆಲೆಯನ್ನು ಸ್ಥಾಪಿಸಲು ಆರ್ಥಿಕ ನಿಧಿಯ್ನು ಮೀಸಲಿಡಲಾಗುವುದು. ಎಂದು ಅವರು ತಿಳಿಸಿದ್ದರು.
ಜಗತ್ತಿನ ಅತ್ಯಧಿಕ ಹಡಗುಸಂಚಾರ ದಟ್ಟಣೆಯಿರುವ ಸಮುದ್ರಮಾರ್ಗದ ಸಮೀಪವಿರುವ ಡಿಜಿಭೌತಿ ದ್ವೀಪರಾಷ್ಟ್ರದಲ್ಲಿ ಚೀನಾವು ತನ್ನ ಪ್ರಪ್ರಥಮ ಮಿಲಿಟರಿ ನೆಲೆಯನ್ನು ಕಳೆದ ವರ್ಷ ಉದ್ಘಾಟಿಸಿದ ಬಳಿಕ, ಆತಂಕಗೊಂಡ ಭಾರತವು ಆ ಪ್ರದೇಶದಲ್ಲಿ ಸೇನಾನೆಲೆಯನ್ನು ಸ್ಥಾಪಿಸಲು ಮುಂದಾಗಿತ್ತು.
ಅಸಂಪ್ಶನ್ ದ್ವೀಪದಲ್ಲಿ ಸೇನಾನೆಲೆ ಸ್ಥಾಪಿಸುವ ವಿಚಾರದ ಬಗ್ಗೆ ತಾನು ಭಾರತ ಪ್ರವಾಸದ ವೇಳೆ ಮೋದಿ ಜೊತೆ ಚರ್ಚಿಸುವುದಿಲ್ಲ ಮತ್ತು ಆ ಯೋಜನೆಯು ಮುಂದುವರಿಯುವುದಿಲ್ಲ.
ಡ್ಯಾನಿ ಫಯ್ಯೂರ್
ಸೆಶೆಲ್ಸ್ ಅಧ್ಯಕ್ಷ