100 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದ ಲೈನ್ ಇನ್‍ಸ್ಪೆಕ್ಟರ್ ಎಸಿಬಿ ಬಲೆಗೆ

Update: 2018-06-22 15:36 GMT

ನೆಲ್ಲೂರು, ಜೂ.22: ನೆಲ್ಲೂರಿನ ಎಪಿ ಟ್ರಾನ್ಸ್ ಕೋದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಲೈನ್ ಇನ್‍ ಸ್ಪೆಕ್ಟರ್ ಆಗಿರುವ  56 ವರ್ಷದ ಎಸ್. ಲಕ್ಷ್ಮಿ ರೆಡ್ಡಿ ಎಂಬಾತನನ್ನು 100 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ  ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. 

ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಗಳ ಒಟ್ಟು ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ದಾಳಿ ತಡ ಸಂಜೆವರೆಗೆ ಮುಂದುವರಿದಿತ್ತು. ಲಕ್ಷ್ಮಿ ರೆಡ್ಡಿ 57.50 ಎಕರೆ ಕೃಷಿ ಭೂಮಿ ಹಾಗೂ  ಎರಡೂ ಜಿಲ್ಲೆಗಳಲ್ಲಿ ಆರು ವಿಲಾಸಿ ಬಂಗಲೆಗಳನ್ನು ಹೊಂದಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

1993ರಲ್ಲಿ ಎಪಿ ಎಸ್‍ಪಿಡಿಸಿಎಲ್  ಅಡಿಯಲ್ಲಿ ಬರುವ ಕಾವಳಿ ಸಬ್ ಸ್ಟೇಶನ್ ನಲ್ಲಿ 1993ರಲ್ಲಿ ಹೆಲ್ಪರ್ ಆಗಿ ಸರಕಾರಿ ಸೇವೆಗೆ ಸೇರಿದ್ದ ಆತ 1996ರಲ್ಲಿ ಸಹಾಯಕ ಲೈನ್ ಮ್ಯಾನ್ ಆಗಿದ್ದ. ಹಾಗೂ 1997ರಲ್ಲಿ ಲೈನ್ ಮ್ಯಾನ್ ಆಗಿ ಭಡ್ತಿಗೊಂಡಿದ್ದ. 2014ರಿಂದ ಆತ ಲೈನ್ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ.

ಕಾವಳಿ ಪಟ್ಟಣದಲ್ಲಿರುವ ಆತನ ಮನೆ, ಆತನ ತಂದೆಯ, ಅತ್ತೆ ಮನೆ ಹಾಗೂ ಸ್ನೇಹಿತರ ನಿವಾಸಗಳ ಮೇಲೆ ದಾಳಿ ನಡೆದಿವೆ. ಆತನ ಬಳಿ ರೂ 9.95 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಹಲವಾರು ವಾಹನಗಳಿವೆಯೆಂದೂ ದಾಳಿ ವೇಳೆ ಕಂಡುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News