ಪೆಟ್ರೋಲಿಯಂ ಉತ್ಪಾದನೆ 10 ಲಕ್ಷ ಬ್ಯಾರಲ್ ಹೆಚ್ಚಿಸಲು ಒಪೆಕ್ ನಿರ್ಧಾರ
ವಿಯನ್ನಾ (ಆಸ್ಟ್ರಿಯ), ಜೂ. 22: ಇರಾನ್‌ನ ತೀವ್ರ ವಿರೋಧದ ಹೊರತಾಗಿಯೂ, ತೈಲ ಉತ್ಪಾದನೆಯನ್ನು ದಿನವೊಂದಕ್ಕೆ 10 ಲಕ್ಷ ಬ್ಯಾರಲ್‌ಗಳಷ್ಟು ಹೆಚ್ಚಿಸುವ ಪ್ರಾಥಮಿಕ ಒಪ್ಪಂದಕ್ಕೆ ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ) ಮತ್ತು ಅದರ ಮಿತ್ರ ದೇಶಗಳು ಬಂದಿವೆ.
ಆದಾಗ್ಯೂ, ಕೆಲವು ದೇಶಗಳಿಗೆ ತಮ್ಮ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗದಿರುವುದರಿಂದ, ವಾಸ್ತವಿಕವಾಗಿ ಹೆಚ್ಚಳ ಕಡಿಮೆಯಾಗಿರುತ್ತದೆ.
ಗುರುವಾರ ರಾತ್ರಿ ವಿಯನ್ನಾದಲ್ಲಿ ನಡೆದ ಜಂಟಿ ಸಚಿವ ಮಟ್ಟದ ಉಸ್ತುವಾರಿ ಸಮಿತಿಯ ಸಭೆಯಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿ ನಾಟಕೀಯ ಬೆಳವಣಿಗೆಗಳು ನಡೆದಿವೆ.
ಉತ್ಪಾದನೆ ಹೆಚ್ಚಳವನ್ನು ವಿರೋಧಿಸಿ ಇರಾನ್‌ನ ತೈಲ ಸಚಿವ ನಾಮ್‌ದಾರ್ ಝಂಗಾನೆ ಸಭೆಯಿಂದ ಹೊರನಡೆದರು. ಇದರ ಬೆನ್ನಿಗೇ, ರಶ್ಯ ಮತ್ತು ಸೌದಿ ಅರೇಬಿಯಗಳನ್ನೊಳಗೊಂಡ ಉಸ್ತುವಾರಿ ಸಮಿತಿಯು ಉತ್ಪಾದನೆ ಹೆಚ್ಚಳಕ್ಕೆ ಶಿಫಾರಸು ಮಾಡಿತು.
ಹೆಚ್ಚಳಕ್ಕೆ ಸಂಬಂಧಿಸಿ ಶುಕ್ರವಾರ ಏರ್ಪಡುವ ಔಪಚಾರಿಕ ಒಪ್ಪಂದಕ್ಕೆ ಇರಾನ್ ವೀಟೊ ಚಲಾಯಿಸಬಹುದಾಗಿದೆ. ಆದರೆ, ಈ ಕ್ರಮವು ಮಾರುಕಟ್ಟೆಗೆ ಹೆಚ್ಚುವರಿ ತೈಲ ಬರುವುದನ್ನು ತಡೆಯಬೇಕೆಂದೇನೂ ಇಲ್ಲ. ಈಗಿರುವ ಒಪ್ಪಂದದ ಚೌಕಟ್ಟಿನಲ್ಲೇ ಹೆಚ್ಚುವರಿ ತೈಲ ಉತ್ಪಾದನೆ ಮಾಡಲು ತಯಾರಿರುವ ದೇಶಗಳನ್ನು ಸೌದಿ ಅರೇಬಿಯ ಒಟ್ಟುಗೂಡಿಸಬಹುದಾಗಿದೆ, ಸೌದಿ ಅರೇಬಿಯ ಏಕಪಕ್ಷೀಯವಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ ಅಥವಾ ಉತ್ಪಾದನೆ ಕಡಿತ ಮಾಡುವ 2016ರ ಒಪ್ಪಂದವನ್ನೇ ತೊರೆಯಬಹುದಾಗಿದೆ.
ಇರಾನ್‌ನ ಪೆಟ್ರೋಲಿಯಂ ಉದ್ಯಮದ ಮೇಲೆ ಅಮೆರಿಕದ ನೂತನ ದಿಗ್ಬಂಧನಗಳು ಪರಿಣಾಮ ಬೀರಿರುವುದನ್ನು ಇರಾನ್ ಸಚಿವರ ಭಿನ್ನಮತವು ತೋರಿಸಿದೆ ಎಂದು ಭಾವಿಸಲಾಗಿದೆ. ಇರಾನ್ ಪರಮಾಣು ಒಪ್ಪಂದದಿಂದ ಈಗಾಗಲೇ ಹಿಂದೆ ಸರಿದಿರುವ ಅಮೆರಿಕವು, ಅದರ ಮೇಲೆ ದಿಗ್ಬಂಧನಗಳನ್ನು ವಿಧಿಸಿದೆ. ಇದು ಇರಾನ್‌ನ ತೈಲ ರಫ್ತಿನ ಮೇಲೆ ಗಣನೀಯ ಪರಿಣಾಮ ಬೀರಲಿದೆ.
ಹೀಗೆ ನಷ್ಟವಾಗಿರುವ ಪೂರೈಕೆಯನ್ನು ಸರಿದೂಗಿಸುವ ಸಾಮರ್ಥ್ಯ ಸೌದಿ ಅರೇಬಿಯಕ್ಕಿದೆ. ಆ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ಸೌದಿ ಮುಂದಾಗಿದೆ.
ಆದರೆ, ಇಂಥ ಕ್ರಮವು ಸಹ ಒಪೆಕ್ ಸದಸ್ಯ ದೇಶಗಳಿಗೆ ರಾಜಕೀಯವಾಗಿ ಸ್ವೀಕಾರಾರ್ಹವಲ್ಲ ಎಂಬುದನ್ನು ಸೌದಿ ಅರೇಬಿಯದ ಇಂಧನ ಸಚಿವ ಖಾಲಿದ್ ಅಲ್-ಫಲಿಹ್ ಒಪ್ಪಿಕೊಳ್ಳುತ್ತಾರೆ.
2016ರ ಐತಿಹಾಸಿಕ ಒಪ್ಪಂದ
2016ರ ಉತ್ತರಾರ್ಧದಲ್ಲಿ, ತೈಲ ಬೆಲೆ ಕುಸಿತದಿಂದ ಪಾತಾಳಕ್ಕಿಳಿದಿದ್ದ ತೈಲ ಮಾರುಕಟ್ಟೆಗೆ ಪುನಶ್ಚೇತನ ನೀಡುವುದಕ್ಕಾಗಿ 24 ಒಪೆಕ್ ಹಾಗೂ ಅದರ ಮಿತ್ರ ದೇಶಗಳು ತೈಲ ಉತ್ಪಾದನೆಯನ್ನು ದಿನಕ್ಕೆ 18 ಲಕ್ಷ ಬ್ಯಾರಲ್‌ಗಳಷ್ಟು ಕಡಿತಗೊಳಿಸಲು ನಿರ್ಧರಿಸಿದ್ದವು.
ಕೆಲವು ದೇಶಗಳು ನಿಗದಿಗಿಂತಲೂ ಕಡಿಮೆ ತೈಲ ಉತ್ಪಾದಿಸಿದವು. ಹಾಗಾಗಿ, ಒಟ್ಟು ಕಡಿತವು ನಿಗದಿಗಿಂತಲೂ ದಿನಕ್ಕೆ 10 ಲಕ್ಷ ಬ್ಯಾರಲ್‌ಗಳಷ್ಟು ಹೆಚ್ಚಾಗಿತ್ತು. ಅಂದಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದೆ.