ಉಳ್ಳಾಲ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವ ಖಾದರ್
ಉಳ್ಳಾಲ, ಜೂ. 22: ಉಳ್ಳಾಲ ನಗರಸಭೆ ಪ್ರಗತಿ ಪರಿಶೀಲನಾ ಸಭೆಯು ಶುಕ್ರವಾರ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಡೆಯಿತು.
ಒಳಚರಂಡಿ ಕಾಮಗಾರಿ ಕುಂಟುತ್ತಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯಿಂದ 1.72 ಕೋಟಿ ಹಣ ಪಾವತಿಸುವಂತೆ ಎಸಿ ಕಳುಹಿಸಿದ ನೋಟಿಸ್‌ಗೂ ಕೆಂಡಾಮಂಡಲವಾದ ಸಚಿವರು, ಅಧಿಕಾರಿಗಳಿಗೆ ನೋಟಿಸ್ ಒಂದು ಆಟವಾಗಿದೆ. ನಗರಸಭೆಯಲ್ಲಿ ಅಷ್ಟು ಹಣ ಎಲ್ಲಿದೆ. ತಕ್ಷಣ ಅಧಿಕಾರಿಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.
ನಗರಸಭಾ ವ್ಯಾಪ್ತಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ತ್ಯಾಜ್ಯ ನಿರ್ವಹಣಾ ಘಟಕ ಇಲ್ಲದಿದ್ದರೆ ಅನುಮತಿ ನೀಡಬಾರದು ಎನ್ನುವ ಕಾನೂನು ಇದ್ದು ಅದನ್ನು ಪಾಲಿಸಿ. ಇಲ್ಲದಿದ್ದರೆ ಮುಂದೆ ಸಮಸ್ಯೆ ಬರುವುದು ಖಂಡಿತ. 10 ಕೋಟಿಯ ಕಟ್ಟಡ ಕಟ್ಟಿಸುವವರು 20 ಲಕ್ಷದ ಘಟಕ ಕಟ್ಟಿಸಲು ಆಗುವುದಿಲ್ಲವೇ ಎಂದರು.
ಹಣ ಪಾವತಿಸಿದ್ದರೂ ಕೆಲಸ ನಡೆದಿಲ್ಲ:
ನಗರಸಭಾ ವ್ಯಾಪ್ತಿಯಲ್ಲಿ ದಾರಿದೀಪ ಮತ್ತು ವಿದ್ಯುತ್ ಕಂಬ ಅಳವಡಿಕೆಗೆ ಹಣ ಪಾವತಿಸಿದ್ದರೂ ಇದುವರೆಗೂ ಕೆಲಸ ನಡೆದಿಲ್ಲ. ನಮ್ಮ ಅವಧಿ ಮುಗಿಯುವ ಮೊದಲು ಕೆಲಸ ಮಾಡಿಸಿ ಎಂದು ನಗರಸಭಾ ಸದಸ್ಯ ಮಹಮ್ಮದ್ ಮುಕಚ್ಚೇರಿ ಮನವಿ ಮಾಡಿದರು. ಈಗಾಗಲೇ 57.70 ಲಕ್ಷ ಪಾವತಿಸಲಾಗಿದ್ದು ಉಳಿದ 13 ಲಕ್ಷ 14ನೇ ಹಣಕಾಸು ಯೋಜನೆಯಡಿ ಪಾವತಿಸುವುದಾಗಿ ಪತ್ರ ಬರೆಯಲಾಗಿದೆ. ಅದಕ್ಕೂ ಮನ್ನಣೆ ಸಿಕ್ಕಿಲ್ಲ ಎಂದು ಪೌರಾಯುಕ್ತೆ ವಾಣಿ ಆಳ್ವ ತಿಳಿಸಿದರು.
ಈ ಸಂದರ್ಭ ಉತ್ತರಿಸಿದ ಅತ್ತಾವರ ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣರಾಜ ಅವರು, 13 ಲಕ್ಷ ಬಾಕಿಯಿರುವುದರಿಂದ ಕೆಲಸ ಪೂರ್ತಿಗೊಳಿಸಿಲ್ಲ ಎಂದರು. ಇದರಿಂದ ಆಕ್ರೋಶಿತರಾದ ಯು.ಟಿ.ಖಾದರ್, ನಗರಸಭೆಯೆಂದರೆ ಸ್ಥಳೀಯ ಸರ್ಕಾರ, ನೀವೂ ಸರ್ಕಾರದ ಒಂದು ಭಾಗ. ನಗರಸಭೆಯಿಂದ ಬರುವ ಪತ್ರಕ್ಕೂ ಬೆಲೆ ಕೊಡುತ್ತಿಲ್ಲ ಎಂದರೆ ಏನರ್ಥ. ನಗರಸಭೆಯ ಹಣ ಬಾಕಿಯಿದೆ ಎಂದು ಸಬೂಬು ನೀಡುವ ನೀವು, ಖಾಸಗಿಯವರು ಬಾಕಿಯಿಟ್ಟಿರುವ ಎಷ್ಟು ಹಣ ವಸೂಲು ಮಾಡಿದ್ದೀರಿ, ಅದರ ವರದಿ ನೀಡಿ ಎಂದು ಹರಿಹಾಯ್ದರು. ಈ ಸಂದರ್ಭ ಅಧಿಕಾರಿ ಉತ್ತರವಿಲ್ಲದೆ ಸುಮ್ಮನೆ ನಿಂತರು. ಸಬೂಬು ನೀಡುವ ಅಗತ್ಯವಿಲ್ಲ. ತಕ್ಷಣ ಕೆಲಸ ಮುಗಿಸಿ ಎಂದು ಸಚಿವರೇ ಸೂಚನೆ ನೀಡಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಅತ್ಯಗತ್ಯ ಕೆಲಸ ಮಾಡಿ, ಅಪಾಯ ಸಂಭವಿಸದಂತೆ ನೋಡಿಕೊಳ್ಳಿ’ ಇದು ಸಚಿವ ಯು.ಟಿ.ಖಾದರ್ ಅಧಿಕಾರಿಗಳ ವಿರುದ್ಧ ಹರಿಹಾಯುತ್ತಾ ನೀಡಿದ ಸೂಚನೆ.
ಟೋಲ್ ಸಂಗ್ರಹ ನಿಲ್ಲಿಸಿ
2014ರಲ್ಲಿ ರಾ.ಹೆ. ಕಾಮಗಾರಿ ಮುಗಿಯಬೇಕಿತ್ತು, ಆದರೆ ಇನ್ನೂ ಕಾಮಗಾರಿ ಮುಗಿಯದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ, ಅದನ್ನು ನಿಲ್ಲಿಸಿ ಎಂದು ಕೌನ್ಸಿಲರ್ ಇಸ್ಮಾಯಿಲ್ ಪೊಡಿಮೋನು ದೂರಿದರು. ಈ ಸಂದರ್ಭ ಕೆಲವು ಕಡೆ ಕಾಮಗಾರಿ ಮುಗಿದಿದೆ ಎಂದು ಅಧಿಕಾರಿ ಸಬೂಬು ನೀಡಿದರು. ಈ ಸಂದರ್ಭವೂ ಹರಿಹಾಯ್ದ ಸಚಿವರು, ನಿಮ್ಮಿಂದಾಗಿ ಸಂಜೆ ವೇಳೆ ತೊಕ್ಕೊಟ್ಟಿನಲ್ಲಿ ರಸ್ತೆ ಬ್ಲಾಕ್ ಆಗಿ ಒಂದೊಂದು ಗಂಟೆ ಸಮಯ ವ್ಯರ್ಥವಾಗುತ್ತಿದೆ. ಉಚ್ಚಿಲ ಕೆಳಸೇತುವೆ ಸಮಸ್ಯೆ ನಾನು ಸರಿ ಮಾಡಬೇಕೇ, ತಕ್ಷಣ ಸಮಸ್ಯೆ ಇರುವಲ್ಲಿ ಹೋಗಿ ಪರಿಹಾರ ಕಲ್ಪಿಸಿ. ಟೋಲ್ ತಡೆ ಬಗ್ಗೆ ಸಂಸದರು ಕೈಗೊಳ್ಳುವ ತೀರ್ಮಾನಕ್ಕೆ ಬೆಂಬಲ ನೀಡೋಣ ಎಂದರು.
ಗಾಂಜಾದಿಂದ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಜಿಲ್ಲೆಯಲ್ಲಿ ಮಟ್ಕಾ, ವೀಡಿಯೋ ಗೇಮ್, ಕ್ಲಬ್, ಮಸಾಜ್ ಪಾರ್ಲರ್ ಇಲ್ಲದ ಏಕೈಕ ಕ್ಷೇತ್ರ ನಮ್ಮದು. ಎಲ್ಲಾದರೂ ಇದ್ದರೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ಸಚಿವರು ಇನ್ಸ್‌ಪೆಕ್ಟರ್ ಗೋಪಿ ಕೃಷ್ಣ ಅವರಿಗೆ ಸೂಚಿಸಿದರು.
ನಗರಸಭೆಗೆ ಆಗಮಿಸಿದ ಸಚಿವ ಯು.ಟಿ.ಖಾದರ್ ಅವರನ್ನು ಅಭಿನಂದಿಸಲಾಯಿತು.