ಲೋಕಾಯುಕ್ತ ನ್ಯಾ.ವಿಶ್ವನಾಥ ವೆನ್ಲಾಕ್-ಲೇಡಿಗೋಶನ್ ಆಸ್ಪತ್ರೆಗೆ ಭೇಟಿ
ಮಂಗಳೂರು, ಜೂ.22: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಅವರು ಶುಕ್ರವಾರ ಜಿಲ್ಲಾ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿ ಕುಂದು ಕೊರತೆಯ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರು.
ವೆನ್ಲಾಕ್‌ಗೆ ದಿಢೀರ್ ಭೇಟಿ ನೀಡಿದ ಅವರು ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಅಲ್ಲದೆ ರೋಗಿಗಳು ಮತ್ತು ಸಂದರ್ಶಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಲೇಡಿಗೋಶನ್ ಆಸ್ಪತ್ರೆಗೂ ಭೇಟಿ ನೀಡಿ ಪರಿಶೀಲಿಸಿದರು.
ರೋಗಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಗಳಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ ಲೋಕಾಯುಕ್ತರು ಸರಕಾರದ ವತಿಯಿಂದ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಮನ ಸೆಳೆಯುವಂತೆ ಸೂಚಿಸಿದರು.
ವೈದ್ಯರ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಯ ಕಟ್ಟಡ, ಐಸಿಯು, ವೈದ್ಯಕೀಯ ಸಲಕರಣೆ ಇತ್ಯಾದಿ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಬೆಂಗಳೂರಿನ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಮಾದರಿಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನೂ ಮೇಲ್ದರ್ಜೆಗೆ ಏರಿಸುವ ಆವಶ್ಯಕತೆ ಇದೆ ಎಂದರು.
ಶಿಕ್ಷಕಿಯರಿಲ್ಲದೆ ವಿದ್ಯಾರ್ಥಿನಿಯರು ಚಿಕಿತ್ಸೆಗೆ: ನಗರದ ಕೋಡಿಯಾಲ್‌ಬೈಲ್‌ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ 15 ವಿದ್ಯಾರ್ಥಿನಿಯರು ಶಿಕ್ಷಕಿಯರಿಲ್ಲದೆ ಚಿಕಿತ್ಸೆಗೆ ಹಾಜರಾದ ಬಗ್ಗೆ ನ್ಯಾ. ವಿಶ್ವನಾಥ್ ಗರಂ ಆದರು. ಈ ವಿದ್ಯಾರ್ಥಿನಿಯರು ಶೀತಜ್ವರ ಮತ್ತಿತ್ಯಾದಿ ಸಣ್ಣಪುಟ್ಟ ಖಾಯಿಲೆಗಾಗಿ ಚಿಕಿತ್ಸೆಗೆ ಆಗಮಿಸಿದ್ದರು. ಆದರೆ, ಯಾವೊಬ್ಬ ಶಿಕ್ಷಕಿಯರು ಇರಲಿಲ್ಲ. ಇದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.
ಅನುದಾನ ಸಾಕಾಗದು: ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ, ವೈದ್ಯಕಿಯೇತರ ಸಿಬ್ಬಂದಿಗಳ ಕೊರತೆ ಇದೆ. ಅಲ್ಲದೆ, ಅನುದಾನ ಕೂಡಾ ಸಾಕಾಗುವುದಿಲ್ಲ ಎಂದು ವೈದ್ಯಾಧಿಕಾರಿಗಳು ಲೋಕಾಯುಕ್ತರ ಗಮನ ಸೆಳೆದರು.
ಈ ಸಂದರ್ಭ ಡಿಎಚ್‌ಒ ರಾಮಕೃಷ್ಣರಾವ್, ಡಿಎಂಒ ರಾಜೇಶ್ವರಿ ದೇವಿ ಮತ್ತಿತರರು ಉಪಸ್ಥಿತರಿದ್ದರು.