​ತಣ್ಣಿರುಬಾವಿ: ನೀರುಪಾಲಾಗುತ್ತಿದ್ದವರನ್ನು ರಕ್ಷಿಸಿದ ಇಜಾಝ್‌ಗೆ ಸನ್ಮಾನ

Update: 2018-06-22 17:36 GMT

ಮಂಗಳೂರು, ಜೂ.22: ತಣ್ಣಿರುಬಾವಿಗೆ ಬಂದಿದ್ದ ವಿದ್ಯಾರ್ಥಿಗಳ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮುಳುಗಿದ ಘಟನೆಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಿದ ಬೆಂಗ್ರೆ ನಿವಾಸಿ ಇಜಾಝ್‌ ಅವರನ್ನು ಶುಕ್ರವಾರ ರಾತ್ರಿ ಸನ್ಮಾನಿಸಲಾಯಿತು.

ಎಸ್‌ಐಒ ಸಂಘಟನೆಯಿಂದ ಇಜಾಝ್‌ಗೆ ನಗದು ಬಹುಮಾನ ನೀಡಿ, ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಇಜಾಝ್‌, ತನಗೆ ಈಜಲು ಬರುತ್ತಿರಲಿಲ್ಲ. ಆದರೂ ನದಿಯಲ್ಲಿ ಮುಳುಗಿದ್ದ ಯುವಕರನ್ನು ರಕ್ಷಿಸಲು ಮುಂದಾದೆ. ಹೇಗಾದರೂ ಮಾಡಿ ಜೀವವನ್ನು ಉಳಿಸಬೇಕೆಂಬ ಧೈರ್ಯದಿಂದಲೇ ನದಿಗೆ ಜಿಗಿದು ರಕ್ಷಿಸಿದೆ ಎಂದರು.

ಯಾವುದೇ ಧರ್ಮದವರು ನೀರಿನಲ್ಲಿ ಬಿದ್ದಿದ್ದರೂ ರಕ್ಷಣೆಗೆ ಮುಂದಾಗುತ್ತೇವೆ. ರಕ್ಷಣೆ ಮಾಡಲು ಬೆಂಗ್ರೆ-ಕಸಬದಲ್ಲಿ ಇಂತಹ ಹಲವಾರು ಮಂದಿ ಸದಾ ಜಾಗೃತರಾಗಿರುತ್ತೇವೆ. ಆದರೂ ರಕ್ಷಿಸುವವರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್‌ಐಒ ಕಾರ್ಯದರ್ಶಿ ಇಮಾಮ್ ಬೆಂಗ್ರೆ, ಅಬ್ದುಲ್ ರಹ್ಮಾನ್ ಮೊನಕಾ, ಸೇವಾದಳದ ಹಮೀದ್, ಜೆಡಿಎಸ್ ಮುಖಂಡ ಅಬ್ದುಲ್ ಲತೀಫ್, ಬಶೀರ್ ಬೆಂಗ್ರೆ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News