ಪುತ್ತೂರು: ಏಳು ಬಾರಿ ಫೋಟೊ ತೆಗೆಸಿದರೂ ಬಾರದ ಅಧಾರ್ ಕಾರ್ಡ್ !

Update: 2018-06-22 17:46 GMT

ಪುತ್ತೂರು, ಜೂ. 22: ಬರೋಬ್ಬರಿ ಏಳು ಬಾರಿ ಫೋಟೊ ತೆಗೆಸಿಕೊಂಡರೂ ಈ ಶಾಲಾ ಬಾಲಕನಿಗೆ ಇನ್ನೂ ಆಧಾರ್ ಕಾರ್ಡ್ ಬಂದಿಲ್ಲ. ಈ ಬಗ್ಗೆ ವಿಚಾರಿಸಿದರೆ ಸಮರ್ಪಕವಾದ ಉತ್ತರವೂ ಸಿಗದೆ ಬಾಲಕ ಹಾಗೂ ಆತನ ಪೋಷಕರು ಕಂಗಾಲಾಗಿದ್ದಾರೆ.

ಬಹಳ ಮುಖ್ಯವಾಗಿರುವ ಆಧಾರ್ ಕಾರ್ಡ್‌ಗಾಗಿ ಈ ಬಾಲಕ ವರ್ಷಗಳಿಂದ ನೋಂದಣಿ ಮಾಡುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಆಧಾರ್ ನೋಂದಣಿ ಕೇಂದ್ರದಲ್ಲಿ ಫೋಟೋ ತೆಗೆಸುತ್ತಲೇ ಇದ್ದಾನೆ ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಫಯಾಝ್ ಎಂಬ ಬಾಲಕನೇ ಆಧಾರ್ ಕಾರ್ಡ್‌ಗಾಗಿ ಏಳು ಬಾರಿ ಫೋಟೋ ತೆಗೆಸಿ ಮಾಹಿತಿ ಕೊಟ್ಟವರು. ಶಾಲಾ ವಿದ್ಯಾರ್ಥಿಯಾಗಿರುವ ಈತ ಶಾಲಾ ದಾಖಲೆಗಳಿಗಾಗಿ ಕಳೆದ ಕೆಲ ವರ್ಷ ಗಳಿಂದ ಆಧಾರ್ ಕಾರ್ಡ್‌ಗಾಗಿ ಫೋಟೊ ತೆಗೆಸುತ್ತಲೇ ಇದ್ದಾನೆ.

ಪುತ್ತೂರು ಪುರಭವನದಲ್ಲಿ ನಡೆಯುತ್ತಿದ್ದ ಆಧಾರ್ ಕಾರ್ಡ್ ನೋಂದಾವಣೆಯಲ್ಲಿ ಎರಡು ಬಾರಿ ಫೋಟೋ ತೆಗೆಸಿ ಮಾಹಿತಿ ಕೊಟ್ಟಿದ್ದಾನೆ. ಇದಲ್ಲದೆ ಅಂಚೆ ಕಚೇರಿಯಲ್ಲಿ, ಪಂಚಾಯತ್ ಕಚೇರಿಯಲ್ಲಿ ಹೀಗೆ ಬಹುತೇಕ ಎಲ್ಲಾ ಕಡೆಗಳಲ್ಲೂ ಇವರು ಆಧಾರ್ ಕಾರ್ಡ್‌ಗಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಆಧಾರ್ ಕಾರ್ಡ್ ಮಾತ್ರ ಇನ್ನೂ ಬಂದಿಲ್ಲ.

ವಿಚಾರಿಸಿದರೆ ರಿಜೆಕ್ಟಾಗಿದೆ ಎಂಬ ಉತ್ತರ: 

ಮುಹಮ್ಮದ್ ಫಯಾಝ್ ಆಧಾರ್‌ಗಾಗಿ ಫೋಟೋ ತೆಗೆಸಿ ಮಾಹಿತಿ ಕೊಟ್ಟಿರುವ ಬಗ್ಗೆ ಅವರಲ್ಲಿ 7 ಸ್ವೀಕೃತಿ ಪ್ರತಿಗಳಿವೆ. ಬಾಲಕನ ತಂದೆ ಅಬ್ದುಲ್ ಹಮೀದ್ ಅವರು ಹೇಳುವಂತೆ ಅರ್ಜಿ ನೋಂದಣಿ ಮಾಡಿ ಫೋಟೊ ತೆಗೆಸಿಕೊಂಡು ಸ್ವೀಕೃತಿ ಪ್ರತಿಗಳನ್ನು ಹಿಡಿದುಕೊಂಡು ಆಧಾರ್ ಕೇಂದ್ರದಲ್ಲಿ ವಿಚಾರಿಸಿದರೆ ಅಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಿ ಇದು ರಿಜೆಕ್ಟ್ ಆಗಿದೆ, ಪುನಃ ನೀವು ಫೋಟೊ ತೆಗೆಸಬೇಕು ಎಂದು ಹೇಳುತ್ತಾರಂತೆ. ಹೀಗೆ 7 ಬಾರಿ ನನ್ನ ಮಗನ ಫೋಟೊ ತೆಗೆಸಿ ಮಾಹಿತಿ ಕೊಟ್ಟಿದ್ದೇನೆ. ಪುತ್ತೂರು ಪುರಭವನದಲ್ಲಿ ನಡೆಯುತ್ತಿದ್ದ ಆಧಾರ್ ಕಾರ್ಡ್ ನೋಂಧಾವಣೆಯಲ್ಲಿ ಎರಡು ಬಾರಿ ಫೋಟೊ ತೆಗೆಸಿ ಮಾಹಿತಿ ಕೊಟ್ಟಿದ್ದೇನೆ. ಆದರೂ ಇದುವರೆಗೆ ಆಧಾರ್ ಕಾರ್ಡ್ ಬಂದಿಲ್ಲ ಇದಕ್ಕೆ ನಾನು ಏನು ಮಾಡಬೇಕು ತಿಳಿಯುತ್ತಿಲ್ಲ. ವಿಳಾಸವನ್ನು ಸಮರ್ಪಕವಾಗಿ ಹಲವು ಬಾರಿ ನೀಡಿದರೂ ಆಧಾರ್ ಕಾರ್ಡ್ ಬಂದಿಲ್ಲ. ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಅಸಹಾಯಕರಾಗಿ ನುಡಿಯುತ್ತಾರೆ.

ಆಧಾರ್ ಪಡೆಯಲು ಸಮಸ್ಯೆಗಳೇನು ಎಂಬುದು ಇನ್ನೂ ಅಬ್ದುಲ್ ಹಮೀದ್ ಹಾಗೂ ಮುಹಮ್ಮದ್ ಫಯಾಝ್ ಅವರಿಗೆ ತಿಳಿದಿಲ್ಲ. ನೋಂದಣಿ ಕೇಂದ್ರದವರಿಗೂ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಶಾಲಾ ದಾಖಲಾತಿಗಾಗಿ ಆಧಾರ್ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿರುವ ಈ ಬಾಲಕನಿಗೆ ಇನ್ನೂ ಆಧಾರ್ ಭಾಗ್ಯ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News