×
Ad

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ತ್ವರಿತ ವರದಿಗೆ ಪೊಲೀಸ್ ಇಲಾಖೆಗೆ ಸೂಚನೆ

Update: 2018-06-23 18:23 IST

ಮಂಗಳೂರು, ಜೂ.23: ಮಕ್ಕಳ ಮೇಲಿನ ದೌರ್ಜನ್ಯ ಸಹಿತ ಮಕ್ಕಳ ನಾಪತ್ತೆ ಪ್ರಕರಣಗಳ ಕುರಿತಾದ ವಿಸ್ತೃತ ವರದಿಗಳನ್ನು ಪೊಲೀಸ್ ಇಲಾಖೆಯು ಸಕಾಲಕ್ಕೆ ಸಂಬಂಧಪಟ್ಟ ಸಮಿತಿಗಳಿಗೆ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ವೈಶಾಲಿ ಸೂಚಿಸಿದರು.

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಶನಿವಾರ ನಡೆದ ಮಕ್ಕಳ ಪಾಲನಾ ಸಂಸ್ಥೆಗಳ ಜಿಲ್ಲಾ ಮಟ್ಟದ ತನಿಖಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯ. ಪ್ರಕರಣದ ಬಗ್ಗೆ ಹೆಚ್ಚು ಮುತುವರ್ಜಿವಹಿಸಬೇಕಾದರೆ ಪೊಲೀಸರು ತನಿಖೆಗೆ ವೇಗ ನೀಡಬೇಕು. ಅಲ್ಲದೆ ಸಕಾಲಕ್ಕೆ ವರದಿ ನೀಡಬೇಕು. ಇದರಿಂದ ಇಂತಹ ಪ್ರಕರಣಕ್ಕೆ ತ್ವರಿತಗತಿಯಲ್ಲಿ ತಾರ್ಕಿಕ ಅಂತ್ಯ ನೀಡಲು ಸಹಾಯವಾಗಲಿದೆ ಎಂದು ಸಮಿತಿಯ ಕೆಲವು ಸದಸ್ಯರು ಅಭಿಪ್ರಾಯಪಟ್ಟರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಅಪರ ಜಿಲ್ಲಾಧಿಕಾರಿ ವೈಶಾಲಿ ಪೊಲೀಸ್ ಇಲಾಖೆಯು ಯಾವ ಕಾರಣಕ್ಕೂ ಮಕ್ಕಳ ಮೇಲೆ ನಡೆಯುವ ವಿವಿಧ ಬಗೆಯ ದೌರ್ಜನ್ಯ ಮತ್ತು ಮಕ್ಕಳ ನಾಪತ್ತೆ ಪ್ರಕರಣವನ್ನು ನಿರ್ಲಕ್ಷಿಸಬಾರದು ಎಂದರು.

ಬಾಲನ್ಯಾಯ ಕಾಯ್ದೆಯಡಿ ಕಳೆದೊಂದು ವರ್ಷದಲ್ಲಿ 65 ಸಂಸ್ಥೆಗಳು ನೋಂದಣಿಗೊಂಡಿದ್ದು, ಜಿಲ್ಲಾ ತನಿಖಾ ಸಮಿತಿಯು 13 ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ಅಧಿಕಾರಿಗಳು ಸಭೆಯ ಗಮನ ಸೆಳೆದರು.

ಬಾಲನ್ಯಾಯ ಕಾಯ್ದೆಯಡಿ ನೋಂದಾಯಿಸಿದ ಬಳಿಕವೂ ಸ್ಥಗಿತಗೊಂಡಿರುವ ಅಥವಾ ಮಕ್ಕಳಿಲ್ಲದಿರುವ 5 ಮಕ್ಕಳ ಪಾಲನಾ ಸಂಸ್ಥೆಗಳನ್ನು ರದ್ದುಪಡಿಸಲಾಗಿದೆ. ಈ ಸಂಸ್ಥೆಯಲ್ಲಿದ್ದ ಮಕ್ಕಳು ಕುಟುಂಬದವರೊಂದಿಗೆ ಪುನರ್ಮಿಲನಗೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಎಚ್‌ಐವಿ, ಏಡ್ಸ್‌ನಿಂದ ಬಾಧಿತ ಅಥವಾ ಸೋಂಕಿತ 537 ಮಕ್ಕಳಿಗೆ 18 ವರ್ಷ ಪ್ರಾಯ ತುಂಬುವವರೆಗೆ ಮಾಸಿಕ 1 ಸಾವಿರ ರೂ.ನಂತೆ ನೀಡಲಾಗುತ್ತದೆ. ಇದರಲ್ಲಿ ಎಸ್ಸಿ 43, ಎಸ್ಟಿ 23, ಅಲ್ಪಸಂಖ್ಯಾತರು 57, ಇತರೆ 414 ಮಕ್ಕಳಿದ್ದಾರೆ. ಆ ಪೈಕಿ 48 ಮಕ್ಕಳು ಪಾಲನಾ ಸಂಸ್ಥೆಯಲ್ಲಿದ್ದರೆ, 489 ಮಕ್ಕಳು ಪಾಲಕರೊಂದಿಗಿದ್ದಾರೆ ಎಂದು ತಿಳಿಸಲಾಯಿತು.

2012ರಿಂದ 2017ರವರೆಗೆ ಜಿಲ್ಲಾ ಎಸ್ಪಿ ವ್ಯಾಪ್ತಿಯ 231 ಮತ್ತು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 202 ಸಹಿತ 433 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ದಾಖಲಾದ 231 ಪ್ರಕರಣದ ಪೈಕಿ 3 ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ, ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 202 ಪ್ರಕರಣದ ಪೈಕಿ 4 ಪ್ರಕರಣದ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ.

2014ರಿಂದ ಕಾಣೆಯಾದ ಮಕ್ಕಳ ಬ್ಯೂರೊವನ್ನು ಸ್ಥಾಪಿಸಲಾಗಿದೆ. ಅದರಂತೆ 4 ವರ್ಷದಲ್ಲಿ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ 51 ಗಂಡು ಮತ್ತು 40 ಹೆಣ್ಣು ಸಹಿತ 91 ಮಕ್ಕಳು ನಾಪತ್ತೆಯಾಗಿದ್ದರು. ಆ ಪೈಕಿ 48 ಗಂಡು ಮತ್ತು 37 ಹೆಣ್ಣು ಸಹಿತ 85 ಮಕ್ಕಳು ಪತ್ತೆಯಾಗಿದ್ದಾರೆ. ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 86 ಗಂಡು ಮತ್ತು 51 ಹೆಣ್ಣು ಸಹಿತ 136 ಮಕ್ಕಳು ನಾಪತ್ತೆಯಾಗಿದ್ದರು. ಆ ಪೈಕಿ 79 ಗಂಡು ಮತ್ತು 50 ಹೆಣ್ಣು 129 ಮಕ್ಕಳು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 228 ಮಕ್ಕಳು ನಾಪತ್ತೆಯಾಗಿದ್ದು, 214 ಮಕ್ಕಳು ಪತ್ತೆಯಾಗಿದ್ದಾರೆ. 14 ಮಕ್ಕಳು ಪತ್ತೆಯಾಗಿಲ್ಲ.

ಮಕ್ಕಳ ಕಲ್ಯಾಣ ಸಮಿತಿಯಲ್ಲಿ 150 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 77 ಪ್ರಕರಣಗಳು ಇತ್ಯರ್ಥಗೊಂಡಿದ್ದರೆ, 73 ಪ್ರಕರಣಗಳು ಬಾಕಿ ಇವೆ. ಅಲ್ಲದೆ ಬಾಲನ್ಯಾಯ ಮಂಡಳಿಯಲ್ಲಿ 216 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 32 ಪ್ರಕರಣಗಳು ಇತ್ಯರ್ಥಗೊಂಡಿದ್ದರೆ, 184 ಪ್ರಕರಣಗಳು ಬಾಕಿ ಇವೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸುಧಾರಣೆಗಾಗಿ ಸ್ಥಾಪಿಸಲಾದ ‘ಅಭಯ ಮಕ್ಕಳ ನಿಧಿ’ಯಡಿ 5 ಮಕ್ಕಳಿಗೆ 27,213 ರೂ.ವಿತರಿಸಲಾಗಿದೆ.

ಸಭೆಯಲ್ಲಿ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್, ದ.ಕ.ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಎಚ್. ಶೆಟ್ಟಿ, ಡಿಡಿಪಿಐ ಶಿವರಾಮಯ್ಯ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಮಕ್ಕಳ ಜಿಲ್ಲಾ ರಕ್ಷಣಾಧಿಕಾರಿ ಉಸ್ಮಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಪ್ರಜ್ಞಾ ಕೌನ್ಸಿಲಿಂಗ್‌ನ ಹಿಲ್ಡಾ ರಾಯಪ್ಪನ್, ಡಿಎಚ್‌ಒ ಡಾ. ರಾಮಕೃಷ್ಣ ರಾವ್, ಡಿಎಂಒ ರಾಜೇಶ್ವರಿ ದೇವಿ, ಡಿಸಿಐಬಿ ಇನ್‌ಸ್ಪೆಕ್ಟರ್ ಸುನಿಲ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಮಕ್ಕಳ ರಕ್ಷಣಾ ನೀತಿಯ ಪ್ರಕಾರ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ರಕ್ಷಣಾ ನೀತಿಯನ್ನು ರೂಪಿಸುವುದರೊಂದಿಗೆ ರಕ್ಷಣಾ ಸಮಿತಿಯನ್ನೂ ರಚಿಸಲು ಅಪರ ಜಿಲ್ಲಾಧಿಕಾರಿ ವೈಶಾಲಿ ಸೂಚನೆ ನೀಡಿದರು.

ಅಲ್ಲದೆ ಎಲ್ಲ ಗ್ರಾಪಂಗಳಲ್ಲೂ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಗ್ರಾಪಂನ ಸಾಮಾಜಿಕ ನ್ಯಾಯ ಸಮಿತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News