×
Ad

ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಗೆ ದ.ಕ.ಜಿಲ್ಲೆ ಆಯ್ಕೆ

Update: 2018-06-23 18:27 IST

ಮಂಗಳೂರು, ಜೂ. 23: ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣಿನ ಅಸಮತೋಲನ ತಪ್ಪಿಸುವ ಸಲುವಾಗಿ ಕೇಂದ್ರ ಸರಕಾರದ ಯೋಜನೆಗಳಲ್ಲಿ ಒಂದಾದ ‘ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆ’ಗೆ ದ.ಕ.ಜಿಲ್ಲೆ ಆಯ್ಕೆಯಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿ 1961ರಲ್ಲಿ ದೇಶದ ಲಿಂಗ ಅನುಪಾತವು 976 ಇದ್ದುದು 2011ಕ್ಕೆ 918ಕ್ಕೆ ಇಳಿದಿದೆ. ಇದನ್ನು ತಡೆಗಟ್ಟುವ ಸಲುವಾಗಿ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ, ಉತ್ತಮ ಶಿಕ್ಷಣಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಪ್ರಸಕ್ತ ಸಾಲಿಗೆ ದ.ಕ.ಜಿಲ್ಲೆಯಲ್ಲದೆ ರಾಜ್ಯದ ಯಾದಗಿರಿ, ಹಾವೇರಿ, ಗದಗ ಜಿಲ್ಲೆಯನ್ನೂ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದರು.

ದ.ಕ.ಜಿಲ್ಲೆಯಲ್ಲಿ 2001ರಲ್ಲಿ ಲಿಂಗ ಅನುಪಾತವು 1022 ಇತ್ತು. 2011ಕ್ಕೆ ಅದು 1020ಕ್ಕೆ ಇಳಿಯಿತು. ಅದಲ್ಲದೆ 6 ವರ್ಷದೊಳಗಿನ ಹೆಣ್ಣುಮಕ್ಕಳಲ್ಲಿ 2001ರಲ್ಲಿ 952 ಲಿಂಗ ಅನುಪಾತವಿದ್ದರೆ 2011ರಲ್ಲಿ 947ಕ್ಕೆ ಕುಸಿದಿದೆ. ಮಕ್ಕಳ ಹೆತ್ತವರಲ್ಲಿ ಏಕ ಮಗು ಹೊಂದುವ ಮನೋಭಾವ, ಪ್ರಥಮ ಮಗು ಗಂಡು ಆದಲ್ಲಿ ಎರಡನೆ ಮಗು ಹೊಂದಲು ಆಸಕ್ತಿ ವಹಿಸದಿರುವುದು, ವಿಭಕ್ತ ಕುಟುಂಬ ಪದ್ಧತಿ, ಮಕ್ಕಳ ಆರೈಕೆಗೆ ಹೆಚ್ಚು ಒತ್ತು ನೀಡುವುದು, ಹೆರಿಗೆಗಳ ಸಂಖ್ಯೆಯಲ್ಲೂ ಇಳಿಮುಖವಾಗಿರುವುದು, ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ, ಅತ್ಯಾಚಾರ, ಆರ್ಥಿಕ ಸ್ಥಿತಿಗತಿ ಮತ್ತು ವರಕ್ಷಿಣೆಯು ಲಿಂಗಾನುಪಾತದಲ್ಲಿ ಇಳಿಮುಖವಾಗಲು ಕಾರಣ ಎಂದು ಸುಂದರ ಪೂಜಾರಿ ತಿಳಿಸಿದರು.

ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆಯ ಪ್ರಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿ ರಚಿಸಲಾಗುವುದು, ನವೆಂಬರ್‌ನಲ್ಲಿ ಹೆಣ್ಣು ಮಕ್ಕಳ ದಿನ ಆಚರಿಸಲಾಗುವುದು, ಹೆಚ್ಚು ಅಂಕ ಗಳಿಸಿದ ಹೆಣ್ಣು ಮಕ್ಕಳು ಮತ್ತವರ ಪೋಷಕರಿಗೆ ಸನ್ಮಾನಿಸಲಾಗುವುದು, ಗ್ರಾಪಂ ಮಟ್ಟದಲ್ಲಿ ಹೆಣ್ಣು ಮಗುವಿನ ಪ್ರದರ್ಶನ ಕಾರ್ಯಕ್ರಮ, ಸ್ಕಾನಿಂಗ್ ಸೆಂಟರ್‌ಗಳ ಕಡ್ಡಾಯ ತಪಾಸಣೆ, ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ಉಲ್ಲಂಘನೆ ಮಾಡುವವರ ಮಾಹಿತಿ ನೀಡುವವರಿಗೆ ಸನ್ಮಾನ, ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರ ಪ್ರೌಢಶಾಲೆಗೆ 10 ಸಾವಿರ ರೂ. ಪ್ರೋತ್ಸಾಹ ಧನ, ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸರಕಾರಿ ಶಾಲೆಯ ಜಿಲ್ಲೆಯ 50 ಹೆಣ್ಣು ಮಕ್ಕಳಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸುಂದರ ಪೂಜಾರಿ ಮಾಹಿತಿ ನೀಡಿದರು.

ಎರಡೂ ಹೆಣ್ಮಕ್ಕಳಿದ್ದು, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಕುಟುಂಬಕ್ಕೆ ಸನ್ಮಾನ, ಕುಟುಂಬದ ಎರಡೂ ಹೆಣ್ಮಕ್ಕಳಿಗೆ 18 ವರ್ಷ ಪ್ರಾಯದವರೆಗೆ ಶಿಕ್ಷಣ ಕೊಡಿಸಿ ವಿವಾಹ ಮಾಡಿಸುವ ಪೋಷಕರಿಗೆ ಸನ್ಮಾನ ಮಾಡುವ ಗುರಿಯನ್ನು ಜಿಲ್ಲೆಯಲ್ಲಿ ಹಾಕಿಕೊಳ್ಳಲಾಗಿದೆ. ಅಲ್ಲದೆ, 50 ಲಕ್ಷ ರೂ.ನ ಕ್ರಿಯಾ ಯೋಜನೆ ತಯಾರಿಸಿ ಕೇಂದ್ರ ಸರಕಾರದ ಅನುಮೋದನೆ ಕಳುಹಿಸಲಾಗಿದೆ ಎಂದು ಸುಂದರ ಪೂಜಾರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News