×
Ad

ಸೋದೆ ಟ್ರಸ್ಟ್‌ನಿಂದ ಕಡಿಯಾಳಿ ಶಾಲೆಯ ದತ್ತು ಸ್ವೀಕಾರ

Update: 2018-06-23 18:38 IST

ಉಡುಪಿ, ಜೂ.23: 147 ವರ್ಷಗಳ ಇತಿಹಾಸ ಹೊಂದಿರುವ ಕಡಿಯಾಳಿ ಕಮಲಾಬಾಯಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್ ದತ್ತು ಸ್ವೀಕರಿಸಿದ್ದು, ಈ ಶಾಲೆಯು ಆಂಗ್ಲ ಮಾಧ್ಯಮದ ಶಿಕ್ಷಣ, ಗುರು ಕುಲ ಪದ್ಧತಿಯ ಮಾದರಿ ಹಾಗೂ ಸಂಸ್ಕೃತ ವೇದ ಪಾಠದೊಂದಿಗೆ ಪ್ರಾರಂಭಗೊಳ್ಳಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್, ಜೂ.25ರಂದು ಸಂಜೆ 4:30ಕ್ಕೆ ಶಾಲೆಯ ಪ್ಲೇ ಹೋಂ, ಎಲ್‌ಕೆಜಿ, ಯುಕೆಜಿ ವಿಭಾಗಗಳನ್ನು ಸೋದೆ ಮಠಾಧೀಶ ಶ್ರೀವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಣಿಪಾಲ ಡಾ.ಟಿ.ಎಂ.ಎ.ಪೈ ಫೌಂಡೇಶನ್ ಕಾರ್ಯದರ್ಶಿ ಟಿ.ಅಶೋಕ್ ಪೈ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಡಿಸಿಸಿ ಶಾಂತಾ ವಿ.ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಭಾಗ ವಹಿಸಲಿರುವರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ವಕ್ವಾಡಿ ಗುರುರಾಜ ಭಟ್ ಅವರನ್ನು ಸನ್ಮಾನಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಭಟ್, ಕಡಿಯಾಳಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಸರಳಾಯ, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News