ಗೋವಾ ಬೀಚ್‌ಗಳಲ್ಲಿ ಸೆಲ್ಫಿ ನಿಷೇಧಿತ ವಲಯ
ಪಣಜಿ, ಜೂ.23: ಗೋವಾದ ಬೀಚ್‌ಗಳಲ್ಲಿ ಸೆಲ್ಫೀ ತೆಗೆಸಿಕೊಳ್ಳುವ ಸಂದರ್ಭ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತರಾಗುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಬೀಚ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೀವರಕ್ಷಕ ಸಮಿತಿಯವರು ರಾಜ್ಯದ ಕರಾವಳಿ ತೀರದುದ್ದಕ್ಕೂ 24 ‘ಸೆಲ್ಫಿ ನಿಷೇಧಿತ’ ವಲಯವನ್ನು ಗುರುತಿಸಿದ್ದಾರೆ.
ಬೀಚ್‌ಗಳಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭ ಈಜಲೆಂದು ತೆರಳಿ ನೀರುಪಾಲಾಗುವ ಘಟನೆಗಳೂ ಹೆಚ್ಚಿರುವ ಕಾರಣ, ಎಲ್ಲಾ ಬೀಚ್‌ಗಳಲ್ಲೂ ‘ಈಜು ನಿಷೇಧ’ ಎಂಬ ಫಲಕ ಹಾಗೂ ಅಪಾಯದ ಸಂಕೇತವಾಗಿರುವ ಕೆಂಪು ಧ್ವಜವನ್ನು ಅಳವಡಿಸಲಾಗಿದೆ ಎಂದು ಸರಕಾರ ನೇಮಿಸಿರುವ ಖಾಸಗಿ ಜೀವರಕ್ಷಕ ಸಮಿತಿ ‘ದೃಷ್ಟಿ ಮರೈನ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಶಂಕರ್ ತಿಳಿಸಿದ್ದಾರೆ.
ಉತ್ತರ ಗೋವಾದ ಬಂಬೋಲಿಮ್ ಹಾಗೂ ಸಿರಿದಾವೊ ನಡುವಿನ ಪ್ರದೇಶಗಳಾದ ಬಾಗಾ ನದಿ, ದೋನ ಪೌಲಾ ಜೆಟ್ಟಿ, ಸಿಂಕ್ವೆರಿಮ್ ಕೋಟೆ, ಅಂಜನಾ, ವಾಗಟೋರ್, ಮೋರ್‌ಜಿಮ್, ಅಶ್ವೆಮ್, ಅರಂಬೋಲ್, ಕೆರಿಮ್ ಪ್ರದೇಶಗಳನ್ನು ‘ಸೆಲ್ಫಿ ನಿಷೇಧಿತ’ ವಲಯಗಳನ್ನಾಗಿ ಗುರುತಿಸಲಾಗಿದೆ. ದಕ್ಷಿಣ ಗೋವಾದ ಅಗೊಂಡಾ, ಬೊಗ್ಮಲೊ, ಹೊಲ್ಲಾಂತ್, ಬೈನಾ, ಜಪಾನೀಸ್ ಗಾರ್ಡನ್, ಬೆತುಲ್, ಕ್ಯನಗ್ವಿನಿಮ್, ಪಲೋಲೆಮ್, ಖೋಲಾ, ಕ್ಯಾಬೊ ಡೆ ರಾಮ, ಪೋಲೆಮ್, ಗಲ್ಗಿಬಾಘ್, ತಲ್ಪೋನ ಮತ್ತು ರಾಜ್‌ಭಾಗ್ ಪ್ರದೇಶಗಳು ‘ಸೆಲ್ಫಿ ನಿಷೇಧಿತ’ ವಲಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿರುವ ಎಚ್ಚರಿಕೆ ಫಲಕಗಳಲ್ಲಿ ಕೆಂಪು ಧ್ವಜಗಳ ಚಿತ್ರ ರಚಿಸಲಾಗುವುದು ಹಾಗೂ ತುರ್ತು ಸಂದರ್ಭದ ಟೋಲ್‌ಫ್ರೀ ದೂರವಾಣಿ ಕರೆ ಸಂಖ್ಯೆಗಳನ್ನು ಬರೆಯಲಾಗುವುದು. ಅಲ್ಲದೆ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಮಾಹಿತಿಯನ್ನೂ ನೀಡಲಾಗುವುದು ಎಂದು ರವಿಶಂಕರ್ ತಿಳಿಸಿದ್ದಾರೆ.
ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಮುಂಗಾರು ಅವಧಿಯಲ್ಲಿ ಕಡಲಿಗೆ ಇಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುವ ಫಲಕಗಳನ್ನು ಬೀಚ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ನಾಲ್ಕು ತಿಂಗಳು ಬೆಳಿಗ್ಗೆ 7:30ರಿಂದ ಸಂಜೆ 6ರವರೆಗೆ ಪ್ರತೀದಿನ ಜೀವರಕ್ಷಕ ದಳದ ಸಿಬ್ಬಂದಿ ಬೀಚ್‌ಗಳಲ್ಲಿ ನಿಗಾ ವಹಿಸುತ್ತಾರೆ ಹಾಗೂ ಹವಾಮಾನ ಸ್ಥಿತಿಯ ಮೇಲೆ ಗಮನ ಇರಿಸುತ್ತಾರೆ. ಜೊತೆಗೆ ರಾತ್ರಿ 8 ಗಂಟೆಯವರೆಗೆ ಜೀವರಕ್ಷಕ ದಳದ ಪ್ರತಿಯೊಂದು ಗೋಪುರಗಳಲ್ಲೂ ಇಬ್ಬರು ಕಾರ್ಯಕರ್ತರು ಕರ್ತವ್ಯದಲ್ಲಿರುತ್ತಾರೆ. ಸಂಜೆ 6ರಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಬೀಚ್ ಸುರಕ್ಷಾ ಗಸ್ತುಪಡೆ ಬೀಚ್‌ಗಳಲ್ಲಿ ಗಸ್ತು ತಿರುಗುತ್ತಿರುತ್ತದೆ ಎಂದು ರವಿಶಂಕರ್ ತಿಳಿಸಿದ್ದಾರೆ.