×
Ad

ಉಡುಪಿ ಹಲಸಿನ ಮೇಳದಲ್ಲಿ ಅಪರೂಪದ ತಿಂಡಿಗಳಿಗೆ ಬಹುಬೇಡಿಕೆ

Update: 2018-06-23 21:17 IST

ಉಡುಪಿ, ಜೂ.23: ಪಾಯಸ, ಚಿಪ್ಸ್, ಬರ್ಪಿ, ದಿಲ್‌ಕುಶ್, ಐಸ್‌ಕ್ರೀಂ, ಬೋಂಡ, ಗಟ್ಟಿ, ಪೋಡಿ, ಪಾನಕ, ಕಬಾಬ್, ಇಡ್ಲಿ... ಹೀಗೆ ಇಲ್ಲಿ ಏನು ತಿಂದರೂ ಎಲ್ಲವೂ ಹಲಸಿನ ಹಣ್ಣಿನಿಂದ ತಯಾರಿಸಿದ್ದು. ಈ ನಾನಾ ಬಗೆಯ ಅಪರೂಪದ ರುಚಿಕರ ಖಾದ್ಯಗಳು ಜನತೆಗೆ ಹೊಸ ರುಚಿಯ ಅನುಭವ ನೀಡಿದವು.

ಉಡುಪಿ ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ಹಲಸು ಮೇಳದಲ್ಲಿ ಎಲ್ಲೆಲ್ಲೂ ಹಲಸಿನ ಹಣ್ಣಿನದ್ದೆ ಪರಿಮಳ. ಹಲಸಿನ ಹಣ್ಣು ಮತ್ತು ಕಾಯಿಯಿಂದ ಸ್ಥಳದಲ್ಲೇ ತಯಾರಿಸಿದ ವಿವಿಧ ತಿಂಡಿತಿನಿಸುಗಳು ಬಿಸಿಬಿಸಿಯಾಗಿ ಮಾರಾಟ ವಾಗುತ್ತಿದ್ದವು.

ಮಂಗಳೂರು ಕೊಡಿಯಾಲ್‌ಬೈಲ್‌ನ ಸರಸ್ವತಿ ಭಟ್, ಮನೆಯಲ್ಲೇ ತಯಾ ರಿಸಿದ ತುಳುವೆ ಹಲಸಿನ ಉಂಡ್ಲುಕಾ, ದೊಡ್ಡಣಗುಡ್ಡೆಯ ವೆಂಕಟೇಶ್ ಮರಾಠೆ ಅವರ ಹಪ್ಪಳ, ಪುದೀನ, ಶುಂಠಿ ಫ್ಲೇವರ್‌ಗಳ ಹಲಸಿನ ಚಿಪ್ಸ್‌ಗೆ ಉತ್ತಮ ಬೇಡಿಕೆ ವ್ಯಕ್ತವಾಗಿತ್ತು. ಕುಂದಾಪುರ ಕಟ್‌ಬೆಲ್ತೂರಿನ ಜಲಜ ಹಲಸಿನ ಹಣ್ಣಿನ ಮುಳ್ಕ, ಹಲಸಿನ ಹಣ್ಣಿನ ಇಡ್ಲಿ, ಗಟ್ಟಿ, ಹಲಸಿನ ಹಣ್ಣಿನ ಬೇಯಿಸಿದ ಬೀಜವನ್ನು ಮೇಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಿದ್ದರು. ಕಾರ್ಕಳ ಸಾಣೂರಿನ ಸಂತೋಷ್ ಭಂಡಾರ್ಕರ್ ಅವರ ಹಲಸಿನ ಹಣ್ಣಿನ ಗಟ್ಟಿ, ಹಲಸಿನ ಬೀಜದ ಬೋಂಡ, ಸೊಳೆಯಿಂದ ತಯಾರಿಸಿದ ಪೋಡಿ, ಹಪ್ಪಳ, ಖಾರಿಯು ಬಾಯ ಯಲ್ಲಿ ನೀರು ಬರಿಸುವಂತಿತ್ತು.

ಬದಿಯಡ್ಕದ ಪಾಂಡುರಂಗ ಭಟ್ ಹಲಸಿನ ಹಪ್ಪಳದ ಚಾಟ್‌ನ್ನು ತಯಾರಿಸಿ ನೂತನ ಖಾದ್ಯವನ್ನು ಸಾರ್ವಜನಿಕರಿಗೆ ಪರಿಚಯಿಸಿದರು. ಮುಲ್ಕಿ ಕರ್ನಿರೆಯ ಗಣೇಶ್ ಪ್ರಭು ಮಾಂಬಳ, ಬೇಯಿಸಿ ಒಣಗಿಸಿದ ಪ್ಯಾಕ್ ಮಾಡಿದ ಹಲಸಿನ ಹಣ್ಣಿನ ಬೀಜ, ಪುತ್ತೂರಿನ ಸುಹಾಸ್ ಹಲಸಿನ ಐಸ್‌ಕ್ರೀಂ, ಹಲಸಿನ ಬೀಜದ ಬರ್ಪಿ, ಹಲಸಿನ ಹಪ್ಪಳ, ಬೆಂಗಳೂರಿನ ಸುನೀಲ್ ಕುಮಾರ್ ಶಿವಮೊಗ್ಗ ಶಿಕಾರಿಪುರದಲ್ಲಿ ತಯಾರಿಸಿದ ಹಲಸಿನ ಪಾನಕ, ದೋಸೆ, ಇಡ್ಲಿಗೆ ಬಳಸುವ ಹಲಸಿನ ಪಲ್ಪ್, ಸಂತೆಕಟ್ಟೆ ಗೀತಾ ತಯಾರಿಸಿದ ಬಿಸಿಬಿಸಿ ಹಲಸಿನ ದಿಲ್‌ಕುಶ್, ಹಣ್ಣಿನ ಮೆನ್ಸ್‌ಕಾಯಿ, ಹಲ್ವ, ಉಪ್ಪಿನಂಗಡಿಯ ಆದರ್ಶ್ ಅವರ ಹಲಸಿನ ಹಣ್ಣಿನ ಪಾಯಸ, ಐಸ್‌ಕ್ರೀಂ, ಹಲಸಿನ ಕಾಯಿಯ ಕಬಾಬ್ ಸ್ಥಳೀಯರಿಗೆ ಹೊಸ ರುಚಿಯ ಅನುಭವವನ್ನು ತಂದುಕೊಟ್ಟಿತು.

ಚೇರ್ಕಾಡಿ ಪೇತ್ರಿಯ ಅನ್ನಪೂರ್ಣ ನರ್ಸರಿಯವರು ಸುಮಾರು 11 ಜಾತಿಯ ಹಲಸಿನ ಗಿಡಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕೆ ಇಟ್ಟಿದ್ದರು. ರುದ್ರಾಕ್ಷಿ, ಥೈಲ್ಯಾಂಡ್ ಪಿಂಕ್, ಚಂದ್ರ ಬಕ್ಕೆ, ಜೇನು ಬಕ್ಕೆ, ಸಿಂಧೂರ, ಗಂಲೆಸ್, ಸಮೃದ್ಧಿ, ಸಿಂಗಾಪುರ, ಎ ಟು ಝೆಡ್, ಸೂಪರ್ ಅರ್ಲಿ, ಡಂಗ್ ಸೂರ್ಯ ಜಾತಿಯ ಅಪರೂಪದ ಹಲಸಿನ ಗಿಡಗಳು ಇಲ್ಲಿ ಎಲ್ಲರ ಗಮನ ಸೆಳೆದವು.

ಖಾದ್ಯಗಳ ರುಚಿ ಸವಿದ ಜಿಲ್ಲಾಧಿಕಾರಿ
ಮೇಳದಲ್ಲಿರುವ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕೆಲವೊಂದು ಹಲಸಿನ ಹಣ್ಣಿನ ಖಾದ್ಯಗಳ ರುಚಿ ಯನ್ನು ಸವಿದರು.
ಕಟ್‌ಬೆಲ್ತೂರಿನ ಜಲಜ ಅವರು ತಯಾರಿಸಿದ ಹಲಸಿನ ಹಣ್ಣಿನ ಮುಳ್ಕದ ಸವಿ ನೋಡಿದ ಜಿಲ್ಲಾಧಿಕಾರಿ, ಸಂತೋಷ್ ಭಂಡಾರ್ಕರ್ ಅವರ ಅಂಗಡಿ ಯಿಂದ ಹಲಸಿನ ಹಣ್ಣಿನ ಗಟ್ಟಿಯನ್ನು ಖರೀದಿಸಿದರು. ಅದೇ ರೀತಿ ಪಾಂಡು ರಂಗ ಭಟ್ ಅವರ ಹಲಸಿನ ಹಪ್ಪಳದ ಚಾಟ್ ರುಚಿುನ್ನು ಕೂಡ ಜಿಲ್ಲಾ ಧಿಕಾರಿ ಸವಿದರು.

ಮೇಳದಲ್ಲಿ 1.5 ಟನ್ ತೂಬಗೆರೆ ಹಲಸು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬು ಗೆರೆ ಹಲಸು ಬೆಳಗಾರರ ರೈತ ಸಂಘವು ಮೇಳಕ್ಕೆ ತಂದಿದ್ದ ಸುಮಾರು 1.5 ಟನ್ ಚಂದ್ರಬಕ್ಕೆ, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ಶಿವರಾತ್ರಿ, ಏಕದಶಿ, ಬಂಗಾರದ ಹಲಸು ಸೇರಿದಂತೆ ವಿವಿಧ ತಳಿಯ ಹಲಸಿಗೆ ಬಹು ಬೇಡಿಕೆಗಳು ವ್ಯಕ್ತವಾದವು. ಜನ ಮುಗಿ ಬಿದ್ದ ಹಲಸನ್ನು ಖರೀದಿಸಿ ಮನೆಗೊಯ್ದರು.

160 ಹಲಸು ಬೆಳೆಯುವ ರೈತ ಸದಸ್ಯರಿಂದ ರಚಿತವಾಗಿರುವ ಈ ಸಂಘದ ವಾರ್ಷಿಕ ವಹಿವಾಟು 28 ಲಕ್ಷ ರೂ. ಇವರು ವರ್ಷಕ್ಕೆ 400ರಿಂದ 800 ಟನ್ ಹಲಸನ್ನು ಬೆಳೆಸುತ್ತಾರೆ. ಮಂಗಳೂರಿನಲ್ಲಿ ಐಸ್‌ಕ್ರೀಂ ತಯಾರಿಕೆಗೆ ವಾರ್ಷಿಕ 80 ರಿಂದ 100 ಟನ್ ಹಲಸನ್ನು ಪೂರೈಕೆ ಮಾಡುತ್ತಿದ್ದಾರೆ. ರಾಜ್ಯ ಮಾತ್ರ ವಲ್ಲದೇ ಆಂದ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಇಲ್ಲಿನ ಹಲಸಿಗೆ ಬಹಳ ಬೇಡಿಕೆ ಇದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ರವಿಕುಮಾರ್.

ಶ್ರೀಲಂಕಾ ಸೇರಿದಂತೆ ಇತರ ದೇಶಗಳಲ್ಲಿ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತಿದೆ. ಕರ್ನಾಟಕದ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಹಲಸನ್ನು ಬೆಳೆಸಲಾಗುತ್ತಿದೆ. ಹಲಸಿನ ಪ್ರಾಮುಖ್ಯತೆ ಮತ್ತು ಅದರ ಉತ್ಪನ್ನಗಳ ತಯಾರಿಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಈ ನಿಟ್ಟಿನಲ್ಲಿ ಇಂತಹ ಮೇಳ ಗಳನ್ನು ಆಯೋಜಿಸಲಾಗುತ್ತಿದೆ.

-ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಉಡುಪಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News