×
Ad

ಎಸಿ ತಾಪಮಾನ 24 ಡಿ.ಸೆಲ್ಸಿಯಸ್ ಗೆ ಇಡುವ ನಿಯಮ ಜಾರಿಗೆ ಸರಕಾರ ಚಿಂತನೆ

Update: 2018-06-23 21:25 IST

ಹೊಸದಿಲ್ಲಿ, ಜೂ.23: ಮನೆ ಹಾಗೂ ಕಚೇರಿಗಳಲ್ಲಿ ಬಳಸುವ ಏರ್ ಕಂಡೀಶನರ್‌ಗಳ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್‌ಗೆ ಇಡುವಂಥ ಕಡ್ಡಾಯ ನಿಯಮವನ್ನು ಜಾರಿಗೆ ತರಲು ಕೇಂದ್ರ ಇಂಧನ ಸಚಿವಾಲಯ ಚಿಂತಿಸುತ್ತಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ಶುಕ್ರವಾರದಂದು ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್.ಕೆ ಸಿಂಗ್, ಈ ನಿಯಮದಿಂದ ಗ್ರಾಹಕರು ಆರ್ಥಿಕ ಮತ್ತು ಆರೋಗ್ಯ ದೃಷ್ಟಿಯಿಂದ ಲಾಭಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಎ.ಸಿ ತಯಾರಕರು ಸೂಕ್ತವಾದ ತಾಪಮಾನ ಇಡುವಂತೆ ಏರ್ ಕಂಡೀಶನರ್‌ಗಳ ಮೇಲೆ ನಮೂದಿಸುವಂತೆಯೂ ಸಚಿವಾಲಯ ಸೂಚಿಸಲಿದೆ. ಈ ಕ್ರಮಕ್ಕೆ ಅನುಮತಿ ದೊರೆತರೆ ಕೆಲವೇ ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ವರದಿ ತಿಳಿಸಿದೆ. 24ರಿಂದ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಇಡುವುದು ಉತ್ತಮ ಎಂಬ ಇಂಧನ ಸಾಮರ್ಥ್ಯ ಮಂಡಳಿ (ಬಿಇಇ) ನೀಡಿದ ಸಲಹೆಯ ಆಧಾರದಲ್ಲಿ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಸಚಿವಾಲಯದ ಪ್ರಕಾರ, ಹವಾನಿಯಂತ್ರಣಗಳನ್ನು ಹೆಚ್ಚು ತಾಪಮಾನದಲ್ಲಿಟ್ಟಾಗ ಕಡಿಮೆ ವಿದ್ಯುತ್ ವ್ಯಯಿಸುತ್ತದೆ. ಪ್ರತೀ ಒಂದು ಡಿಗ್ರಿ ಸೆಲ್ಸಿಯಸ್‌ ಏರಿಕೆಗೆ ಶೇ. ಆರು ಕಡಿಮೆ ವಿದ್ಯುತ್ ವ್ಯಯವಾಗುತ್ತದೆ.

ಸಿಂಗ್ ಹೇಳುವಂತೆ, ಸಾಮಾನ್ಯ ಮಾನವ ದೇಹ 36-37 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಆದರೆ ಬಹುತೇಕ ವಾಣಿಜ್ಯ ಸಂಸ್ಥೆಗಳ ಹವಾನಿಯಂತ್ರಣಗಳಲ್ಲಿ 18ರಿಂದ 21 ಡಿ.ಸೆ ತಾಪಮಾನ ಇಡಲಾಗಿರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೇವಲ ಶೇ. ಆರು ಭಾರತೀಯ ಮನೆಗಳಲ್ಲಿ ಎ.ಸಿ ಬಳಸಲಾಗುತ್ತದೆ. ಎಲ್ಲ ಗ್ರಾಹಕರು ಒಂದೇ ತಾಪಮಾನವನ್ನು (24 ಡಿ.ಸೆ) ಇಟ್ಟರೆ ವಾರ್ಷಿಕ 20 ಬಿಲಿಯನ್ ಯುನಿಟ್ ವಿದ್ಯುತ್ ಉಳಿತಾಯ ಮಾಡಬಹುದು ಎಂದು ಬಿಇಇ ತಿಳಿಸಿದೆ. ಸದ್ಯ ಬಳಸಲಾಗುತ್ತಿರುವ ಹವಾನಿಯಂತ್ರಣಗಳ ಸಾಮರ್ಥ್ಯ 80 ಮಿಲಿಯನ್ ಟಿಆರ್ (ರೆಫ್ರಿಜರೇಟರ್ ಟನ್) ಆಗಿದೆ. 2030ರ ವೇಳೆಗೆ ಈ ಪ್ರಮಾಣ 250 ಮಿಲಿಯನ್ ಟಿಆರ್ ತಲುಪಲಿದೆ. ಇಷ್ಟು ಬೃಹತ್ ಪ್ರಮಾಣದ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡರೆ ಭಾರತವು ಪ್ರತಿದಿನ 40 ಮಿಲಿಯನ್ ಟನ್ ಯುನಿಟ್ ವಿದ್ಯುತ್ ಉಳಿತಾಯ ಮಾಡಬಹುದು ಎಂದು ವರದಿ ತಿಳಿಸಿದೆ. ಏರ್ ಕಂಡೀಶನರ್‌ಗಳಲ್ಲಿ ಸಮಾನವಾದ 24 ಡಿ.ಸೆ ತಾಪಮಾನ ಇಡುವ ನಿಯಮದ ಆರಂಭದಲ್ಲಿ ಎಲ್ಲ ಸಂಸ್ಥೆಗಳು ಮತ್ತು ಉತ್ಪಾದಕರಿಗೆ ಮುಖ್ಯವಾಗಿ ವಿಮಾನ ನಿಲ್ದಾಣಗಳು, ಹೊಟೇಲ್‌ಗಳು, ಶಾಪಿಂಗ್ ಮಾಲ್‌ಗಳು, ಕಚೇರಿಗಳು ಮತ್ತು ಸರಕಾರಿ ಕಚೇರಿಗಳಿಗೆ ಸಲಹಾ ಪತ್ರಗಳನ್ನು ರವಾನಿಸಲಾಗುವುದು. ನಂತರ ನಾಲ್ಕರಿಂದ ಆರು ತಿಂಗಳ ಕಾಲ ಜಾಗೃತಿ ಅಭಿಯಾನ ನಡೆಸಲಾಗುವುದು. 24 ಡಿ.ಸೆ ತಾಪಮಾನವನ್ನು ನಿಯಮವಾಗಿ ರೂಪಿಸುವ ಮೊದಲು ಸಚಿವಾಲಯ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಇದೇ ರೀತಿಯ ನಿಯಮ ಜಪಾನ್ ದೇಶದಲ್ಲಿದ್ದು ಅಲ್ಲಿನ ಸರಕಾರ ಹವಾನಿಯಂತ್ರಣಗಳ ತಾಪಮಾನವನ್ನು 28 ಡಿ.ಸೆಗೆ ನಿಯಂತ್ರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News