×
Ad

ಕೃಷಿಕರಿಗೆ ಹೆಚ್ಚಿನ ಇಳುವರಿ ತೆಗೆಯಲು ತಾಂತ್ರಿಕ ಮಾಹಿತಿಯ ಅಗತ್ಯವಿದೆ -ವೇದವ್ಯಾಸ ಕಾಮತ್‌

Update: 2018-06-23 21:53 IST

ಮಂಗಳೂರು, ಜೂ.23:ಕೃಷಿಕರಿಗೆ ಹೆಚ್ಚು ಇಳುವರಿ ತೆಗೆಯಲು ತಾಂತ್ರಿಕತೆಯ ಮಾಹಿತಿಯ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.ನಗರದ ಐಸಿಎಆರ್ -ಕೃಷಿ ವಿಜ್ಞಾನ ಕೇಂದ್ರ,ದಕ್ಷಿಣ ಕನ್ನಡ (ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ,ಬೀದರ್)ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ,ಹೈದರಾಬಾದ್ ಮತ್ತು ಸಮೇತಿ,ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಪದವಿ ಪ್ರಮಾಣ ಸಮಾರಂಭವನ್ನು ಉದ್ಘಾಟಿಸಿ ಡಿಪ್ಲೋಮಾ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.

ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಅನುಭವದ ಹಾಗೂ ಹಿರಿಯ ಅನುಭವದ ಆಧಾರದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.ಕೃಷಿಕೂಲಿಕಾರರ ಸಮಸ್ಯೆಯನ್ನು ಕೃಷಿಕರು ಎದುರಿಸುತ್ತಿದ್ದಾರೆ. ತಮ್ಮ ಭೂಮಿಯಲ್ಲಿ ಹೆಚ್ಚಿನ ಬೆಳೆ ತೆಗಯಬೇಕಾದರೆ ಆಧುನಿಕ ಕೃಷಿಯ ತಾಂತ್ರಿಕ ಮಾಹಿತಿ ದೊರೆಯಬೇಕಾಗುತ್ತಿದೆ. ದೇಶದ ಜನರು ಆಹಾರಕ್ಕೆ ಇಂದಿಗೂ ರೈತರ ಬೆಳೆಯನ್ನೇ ಅವಲಂಭಿಸಿರುವುದರಿಂದ ಕೃಷಿ ಬಗ್ಗೆ ಹೆಚ್ಚಿನ ಗಮನಹರಿಸಬೇಕು . ಈ ನಿಟ್ಟಿನಲ್ಲಿ ಕೃಷಿಕ ಪರಿಕರಗಳನ್ನು ಮಾರಾಟ ಮಾಡುವವರನ್ನು ಅವಲಂಭಿಸಿರುತ್ತಾರೆ. ಕೃಷಿಪರಿಕರ ಮಾರಾಟಗಾರರಿಗೆ ಕೃಷಿಯ ವೈಜ್ಞಾನಿಕ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ಮೂಲಕ ನೀಡುವ ಡಿಪ್ಲೋಮಾ ಕೋರ್ಸ್ ಆರಂಭಿಸಿರುವುದು ಶ್ಲಾಘನೀಯ ಎಂದರು.

ಕೃಷಿಕರು ಕೃಷಿಯ ಇಲಾಖೆಗಳಿಂದ ಪಡೆಯುವ ಮಾಹಿತಿ ಶೇ 2ಮಾತ್ರ:- ಕೃಷಿಕರು ತಮ್ಮ ಜಮೀನಿನಲ್ಲಿ ಉತ್ತಮವಾದ ರೀತಿಯ ಕೃಷಿ ಮಾಡುವ ಬಗ್ಗೆ ಕೃಷಿ ಇಲಾಖೆ ಅಥವಾ ವಿಶ್ವ ವಿದಯನಿಲಯಕ್ಕಿಂತ ಹೆಚ್ಚಾಗಿ ಇತರ ಮೂಲಗಳನ್ನು ಅವಲಂಭಿಸಿರುತ್ತಾರೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ದೇಸಿ ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ.ಪೆನ್ನೋಬಳಿ ಸ್ವಾಮಿ ತಿಳಿಸಿದ್ದಾರೆ.

ಕೃಷಿಕರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯ ಬೇಕು,ಯಾವ ರೀತಿ ಬೆಳೆಯ ಬೇಕು ಎನ್ನುವ ಮಾಹಿತಿಯನ್ನು ಯಾರಿಂದ ಪಡೆಯುತ್ತಾರೆ ಎನ್ನುವ ಬಗ್ಗೆ ನಡೆಸಿದ ಸಮೀಕ್ಷೆ ನಡೆಸಲಾಗಿದೆ.ಈ ಸಮೀಕ್ಷೆಯ ಪ್ರಕಾರ ಶೇ 20ರಷ್ಟು ಕೃಷಿಕರು ಈ ಮಾಹಿತಿಯನ್ನು ಪ್ರಗತಿಪರ ಕೃಷಿಕರನ್ನು ಭೇಟಿ ಮಾಡುವ ಮೂಲಕ ಪಡೆಯುತ್ತಾರೆ. ಶೇ 15ರಷ್ಟು ಕೃಷಿ ಕರು ಕೃಷಿ ಪರಿಕರ ಮಾರಾಟಗಾರರಿಂದ ಪಡೆಯುತ್ತಾರೆ.ಉಳಿದಂತೆ 10ರಿಂದ 15ರಷ್ಟು ಕೃಷಿಕರು ಮಾಧ್ಯಮಗಳು ಮೂಲಕ ಮಾಹಿತಿ ಪಡೆಯುತ್ತಾರೆ ಎಂದು ಪೆನ್ನೊಬಳಿ ಸವಮಿ ತಿಳಿಸಿದ್ದಾರೆ.

ಉಳಿದಂತೆ ಕೇವಲ ಶೇ 2ರಷ್ಟು ಕೃಷಿಕರು ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳಂತ ಸರಕಾರಿ ಸಂಸ್ಥೆಗಳಿಂದ ಮಾಹಿತಿ ಪಡೆಯುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.ಇದರೊಂದಿಗೆ ಕೃಷಿ ಪರಿಕರ ಮಾರಾಟ ಮಾಡುವವರಲ್ಲಿ ಎಷ್ಟು ಜನ ಕೃಷಿ ಪದವಿಧರರು ಎಷ್ಟು ಇದ್ದಾರೆ ಎಂದಾಗ ಶೇ 99ರಷ್ಟು ಮಂದಿ ಕೃಷಿ ಪದವೀಧರರಿಲ್ಲ ಎನ್ನುವುದು ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ಕೃಷಿ ವಿಶ್ವ ವಿದ್ಯಾನಿಲಯದ ಮಾಹಿತಿಯನ್ನು ಕೃಷಿ ಪರಿಕರ ಮಾರಾಟ ಮಾಡುವವರಿಗೆ ಕಡ್ಡಾಯವಾಗಿ ನೀಡಬೇಕು ಎನ್ನುವ ಹಿನ್ನೆಲೆಯಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಪದವಿ ಆರಂಭಿಸಲಾಗಿದೆ ಎಂದು ಡಾ.ಪನ್ನೊಬಳಿ ಸ್ವಾಮಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 220 ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಡಿಪ್ಲೋಮಾ ಪದವಿ ನೀಡುವ ಗುರಿ ಹೊಂದಲಾಗಿದೆ.ಪ್ರಥಮ ತಂಡದ ತರಬೇತಿ ಪೊರ್ಣಗೊಂಡಿದೆ.ವಾರಂತ್ಯದಲ್ಲಿ ಒಂದು ದಿನ ಸೇರಿದಂತೆ ಒಂದು ವರ್ಷಗಳ ಕಾಲ ಈ ತರಬೇತಿ ನಡೆದಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ತಿಳಿಸಿದ್ದಾರೆ.

ಸಮಾರಂಭದಲ್ಲಿ ದ.ಕ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಆ್ಯಂಟೊನಿ ಮರಿಯಾ ಇಮ್ಯಾನ್ಯುಯೆಲ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಹೆಚ್.ಆರ್. ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಮೀನುಗಾರಿಕಾ ಮಹಾ ವಿದ್ಯಾಲಯದಡೀನ್‌ಡಾ.ಎಂ.ಎನ್.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿ ದ್ದರು. ಕಿಶೋರ್ ನಾಯಕ್ ವಂದಿಸಿದರು.ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News