×
Ad

ಲಕ್ಷ್ಮಣ್ ಕುಮಾರ್ ಮಲ್ಲೂರ್‌ಗೆ ‘ಚಾವಡಿ ತಮ್ಮನ’ ಕಾರ್ಯಕ್ರಮ

Update: 2018-06-23 22:07 IST

ಮಂಗಳೂರು, ಜೂ.23: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ನಗರದ ಉರ್ವಸ್ಟೋರ್‌ನ ತುಳು ಭವನದ ಸಿರಿಚಾವಡಿಯಲ್ಲಿ ಶನಿವಾರ ರಂಗಭೂಮಿ ಹಿರಿಯ ಕಲಾವಿದ ಲಕ್ಷ್ಮಣ್ ಕುಮಾರ್ ಮಲ್ಲೂರು ಅವರಿಗೆ ‘ಚಾವಡಿ ತಮ್ಮನ’ ಕಾರ್ಯಕ್ರಮ ಜರುಗಿತು.

ನಟ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅಭಿನಂದನಾ ಭಾಷಣ ಮಾಡಿ ಲಕ್ಷ್ಮಣ್ ಕುಮಾರ್ ಮಲ್ಲೂರು ವೃತ್ತಿ, ಹವ್ಯಾಸಿ ರಂಗಭೂಮಿಯಲ್ಲಿ ಹಾಗೂ ಸಿನೆಮಾದಲ್ಲಿ ನಟಿಸಿದ್ದರೂ, ಯಾರೊಂದಿಗೂ ನಿಷ್ಠುರ ಕಟ್ಟಿಕೊಳ್ಳದೆ ಅಜಾತಶತ್ರುವಾಗಿ ಕೆಲಸ ಮಾಡಿದ್ದಾರೆ ಎಂದರು.

‘ಚಾವಡಿ ತಮ್ಮನ’ ಸ್ವೀಕರಿಸಿ ಮಾತನಾಡಿದ ಲಕ್ಷ್ಮಣ್ ಕುಮಾರ್ ಮಲ್ಲೂರು, ಮಲ್ಲೂರು ಮತ್ತು ಅಮ್ಮುಂಜೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ನನಗೆ ನಾಟಕದಲ್ಲಿ ನಟಿಸುವ ಅವಕಾಶ ದೊರಕಿತ್ತು. ಚಕ್ರವ್ಯೆಹ ನಾಟದಲ್ಲಿ ವೃದ್ಧನ ಪಾತ್ರ ಮಾಡಿ ಲಕ್ಷ್ಮಣ ಕುಮಾರ್ ಮಲ್ಲೂರು ಎಂದು ಹೆಸರು ಗಳಿಸಿದೆ. ನಾಟಕದ ಕಾರಣದಿಂದಲೇ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ದೊರೆಯಿತು. ಬಳಿಕ ನಾಟಕದಲ್ಲಿ ಅವಕಾಶ ಹೆಚ್ಚಾಯಿತು, ವಿಜಯ ಕುಮಾರ್ ಅವರ ನಾಟಕಗಳು ಮತ್ತು ತುಳು ಸಿನೆಮಾದಲ್ಲಿ ನಟಿಸುವ ಯೋಗ ದೊರೆಯಿತು. ಮೂರು ಕನ್ನಡ ಸಿನೆಮಾದಲ್ಲೂ ನಟಿಸಿದ್ದೇನೆ. ಅಕಾಡಮಿಯ ಸನ್ಮಾನ ರಂಗಭೂಮಿಯಲ್ಲಿ ಇನ್ನೂ ಕೆಲಸ ಮಾಡಲು ಉತ್ತೇಜನ ನೀಡಿದೆ ಎಂದರು.

ಕುಡ್ಲ ತುಳುಕೂಟ ಅಧ್ಯಕ್ಷ ದಾಮೋದರ ನಿಸರ್ಗ ಸನ್ಮಾನ ನೆರವೇರಿಸಿದರು. ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು. ಸದಸ್ಯರಾದ ತಾರಾನಾಥ ಗಟ್ಟಿ ಕಾಪಿಕಾಡ್ ವಂದಿಸಿದರು. ಶಿವಾನಂದ ಕರ್ಕೇರ ಸನ್ಮಾನ ಪತ್ರ ವಾಚಿಸಿದರು. ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News