×
Ad

ಸ್ಕಿಲ್‌ಗೇಮ್, ಜುಗಾರಿ, ಮಸಾಜ್, ಜೂಜು ಕೇಂದ್ರಗಳ ಮೇಲೆ ಕ್ರಮಕ್ಕೆ ಆಗ್ರಹ

Update: 2018-06-23 22:09 IST

ಮಂಗಳೂರು, ಜೂ.23: ನಗರದ ಹಲವೆಡೆ ಸ್ಕಿಲ್‌ಗೇಮ್, ಜುಗಾರಿ ಅಡ್ಡೆ, ಮಸಾಸ್ ಪಾರ್ಲರ್ ಮತ್ತೆ ಕಾರ್ಯಾಚರಿಸಲು ಆರಂಭಿಸಿವೆ. ರಿಕ್ರಿಯೇಶನ್ ಕ್ಲಬ್ಗಳ ಹೆಸರಿನಲ್ಲಿ ಅನುಮತಿಯನ್ನು ಪಡೆದು ಇವುಗಳು ರಾಜಾರೋಷವಾಗಿ ನಡೆಯುತ್ತಿವೆ. ಇವುಗಳ ಹಾವಳಿಯಿಂದಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳು ಉಂಟಾಗಲಿದೆ.

ಕೂಲಿಕಾರರು, ಅಟೋ ಚಾಲಕರು ಹಾಗೂ ಸಣ್ಣ ಪುಟ್ಚ ವ್ಯಾಪಾರಿಗಳನ್ನೇ ಗುರಿಯಾಗಿಸಿ ಅವರ ದುಡಿಮೆಯ ಹಣವನ್ನು ಪೂರ್ಣವಾಗಿ ಕಿತ್ತುಕೊಳ್ಳುವ ಇಂಥ ಜೂಜುಗಳಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಕಾಲೇಜು ವಿದ್ಯಾರ್ಥಿಗಳೂ ಜೂಜಾಟದ ಚಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಹಾಗಾಗಿ ಇವುಗಳನ್ನು ನಿಗ್ರಹಿಸಲು ಸೂಕ್ತ ಕ್ರಮ ಜರಗಿಸಬೇಕು ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.

ವಿಧಾಸಸಭಾ ಚುನಾವಣಾ ಪೂರ್ವದಲ್ಲಿ ಇಂಥ ಜೂಜು ಕೇಂದ್ರಗಳನ್ನು ಮುಚ್ಚಲಾಗಿತ್ತು. ಆದರೆ ಇದೀಗ ಮತ್ತೆ ತಲೆ ಎತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಮಾಫಿಯಾದ ಹೊಂದಾಣಿಕೆಯಿಂದಾಗಿ ಇಂಥ ಜೂಜು ಕೇಂದ್ರಗಳು ಮತ್ತೆ ಬೆಳೆಯಲು ಕಾರಣವಾಗಿದೆ. ಕೆಲವು ಪೊಲೀಸರು ನೇರವಾಗಿ ಶಾಮೀಲಾತಿ ಹೊಂದಿ ಮಾಫಿಯಾದೊಂದಿಗೆ ಕೈ ಜೋಡಿಸಿರುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇಂಥ ಅಕ್ರಮ ವ್ಯವಹಾರಗಳು ಕ್ರಿಮಿನಲ್ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸುವ ಅಪಾಯ ಇದ್ದು ನಗರದಲ್ಲಿ ಶಾಂತಿ ಸೌಹಾರ್ದತೆಗೂ ಧಕ್ಕೆ ಆಗಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹಾಗೂ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News