ಸಂತ್ರಸ್ತರಿಗೆ ಪರಿಹಾರ ವಿತರಣೆ ವೇಗ ಪಡೆಯಲಿ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಜೂ.23: ಮಳೆ, ನೆರೆ ಮತ್ತು ಪ್ರಕೃತಿ ವಿಕೋಪದಲ್ಲಿ ಆದ ನಷ್ಟಕ್ಕೆ ಪರಿಹಾರದ ಚೆಕ್‌ನ್ನು ಸಂತ್ರಸ್ತರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮನಪಾ ಕಡೆಯಿಂದ ವೇಗ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ.ವೇದವ್ಯಾಸ ಕಾಮತ್ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಪಾಲಿಕೆ ಆಯುಕ್ತರು, ಇಂಜಿನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳ ಜತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೈನೇಜ್‌ಗೆ ಸಂಬಂಧಪಟ್ಟ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಮತ್ತು ಯಾವುದು ಅರ್ಧಕ್ಕೆ ನಿಂತಿವೆ ಮತ್ತು ಯಾವ ವಾರ್ಡಿನಲ್ಲಿ ಡ್ರೈನೇಜ್ ನೀರು ತೆರೆದ ಚರಂಡಿಗಳಲ್ಲಿ ಹೋಗುತ್ತಿವೆ ಎನ್ನುವುದರ ಕುರಿತ ಮಾಹಿತಿಯನ್ನು 7 ದಿನಗಳೊಳಗೆ ತಮಗೆ ನೀಡಬೇಕು ಎಂದು ಸೂಚನೆ ನೀಡಿದರು.
ಒಳಚರಂಡಿ ವ್ಯವಸ್ಥೆಯಿಂದ ನೀವು ತೆರೆದ ಚರಂಡಿಗೆ ಕನೆಕ್ಷನ್ ಕೊಟ್ಟಿರುವುದರಿಂದ ವಾತಾವರಣ ಗಬ್ಬುವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತ್ತಿದೆ. ಇದನ್ನು ಪತ್ತೆ ಹಚ್ಚಿ ಚರಂಡಿಗೆ ಬರುವುದನ್ನು ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕಲುಷಿತಗೊಂಡಿರುವ ಬಾವಿಗಳನ್ನು ದುರಸ್ತಿಗೊಳಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ಆದೇಶ ನೀಡಿದರು.
ಎಸ್‌ಎಫ್‌ಸಿ ಫಂಡ್, ಮುಖ್ಯಮಂತ್ರಿ 100 ಕೋಟಿ ರೂ. ಅನುದಾನ, 13/14ನೇ ಹಣಕಾಸು ಯೋಜನೆ, ಅಮೃತ ಯೋಜನೆ, 2ನೇ ಎಡಿಬಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಅನುದಾನದಡಿಯಲ್ಲಿ ಕಾಮಗಾರಿ ಮುಗಿಸಿರುವ ಮತ್ತು ಚಾಲನೆಯಲ್ಲಿರುವ ಬಗ್ಗೆ ಮಾಹಿತಿ ಕೊಡಬೇಕು ಮತ್ತು ಪ್ರಾರಂಭವೇ ಆಗಿಲ್ಲ ಎಂದಾದರೆ ಅದರ ಕಾರಣಗಳನ್ನು ತಿಳಿಸಿ ವಾರದೊಳಗೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಆಗಬೇಕಾಗಿರುವ ಕಾಮಗಾರಿಗಳನ್ನು ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಶೀಘ್ರದಲ್ಲಿ ಆಗುವ ಹಾಗೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಯಾವೆಲ್ಲ ವಾರ್ಡ್‌ಗಳಲ್ಲಿ ಒಳಚರಂಡಿ ಸಮಸ್ಯೆಗಳು ಇವೆಯೋ ಅವುಗಳನ್ನು ಸಮರೋಪಾದಿಯಲ್ಲಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಮಂಗಳೂರು ನಗರ ದಕ್ಷಿಣದ 38 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಯಾವ ವಾರ್ಡ್‌ಗಳಿಗೆ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ, ಅಂತಹ ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಹಂತ ಹಂತವಾಗಿ ಅದನ್ನು ಪರಿಹರಿಸಲು ನೀರು ಸರಬರಾಜು ವಿಭಾಗದ ಇಂಜಿನಿಯರ್‌ಗಳಿಗೆ ಶಾಸಕರು ತಿಳಿಸಿದರು.
ಡೆಡ್‌ಲೈನ್ ಇಟ್ಟು ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು. ಯಾವುದಾದರೂ ಒಂದು ವಾರ್ಡಿನಲ್ಲಿ 24x7 ನೀರು ಬರುವ ವ್ಯವಸ್ಥೆಯನ್ನು ಮಾಡಿ ಮಾದರಿ ವಾರ್ಡ್‌ಆಗಿ ರೂಪಿಸಬೇಕು. ನಂತರ ಹಂತಹಂತವಾಗಿ ಒಂದೊಂದೇ ವಾರ್ಡ್‌ಗಳಿಗೆ 24x7 ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಒಂದು ವರ್ಷದ ಒಳಗೆ ಸಮರ್ಪಕವಾಗಿ ಯೋಜನೆ ಕಾರ್ಯಗತಗೊಳಿಸಬೇಕು. ಹೀಗೆ ಮಾಡಲು ನಿಮಗೆ ಏನಾದರೂ ತೊಂದರೆ ಇದ್ದರೆ ಸರಕಾರದ ವತಿಯಿಂದ ಬೇಕಾದ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನು ಮುಂದೆ ಬರಬಾರದು, ಅದಕ್ಕೆ ಬೇಕಾದ ಕಾರ್ಯಯೋಜನೆ ಬೇಗ ರೂಪಿಸಬೇಕು ಎಂದು ಶಾಸಕರು ಸೂಚನೆ ನೀಡಿದರು. ಪಾಲಿಕೆಗೆ ಸೇರಿದಂತಹ ಓವರ್‌ಹೆಡ್ ಟ್ಯಾಂಕ್‌ಗಳು, ಸಂಪುಗಳ ಕ್ಲೀನಿಂಗ್ ಎಷ್ಟೋ ವರ್ಷಗಳಿಂದ ಆಗಿಲ್ಲ ಎಂದು ತನ್ನ ಗಮನಕ್ಕೆ ಬಂದಿದೆ. ಕೂಡಲೇ, ತುಂಬೆಯಿಂದ ನೀರು ಪೂರೈಕೆಯಾಗುವ ರೂಟ್‌ಗಳ ಪ್ರಕಾರ ಓವರ್‌ಹೆಡ್ ಟ್ಯಾಂಕ್‌ಗಳು, ಸಂಪುಗಳ ಕ್ಲೀನಿಂಗ್ ಮಾಡಲು ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು.
ತುಂಬೆಯಿಂದ ಮಂಗಳೂರಿನವರೆಗೆ ಇರುವ ಅನಧಿಕೃತ ನಳ್ಳಿಗಳ ಜೋಡಣೆ, ವೆಟ್‌ವೆಲ್, ಟ್ರೀಟ್‌ಮೆಂಟ್ ಪ್ಲಾಂಟ್‌ಗಳ ಪಟ್ಟಿ ಮತ್ತು ಅಲ್ಲಿರುವ ಸಿಬ್ಬಂದಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಸ್ಮಾರ್ಟ್‌ಸಿಟಿಯ ಕಾಮಗಾರಿ ಈಗ ಯಾವ ಹಂತದಲ್ಲಿದೆ ಎನ್ನುವುದರ ಮಾಹಿತಿ ಪಡೆದುಕೊಂಡ ಶಾಸಕರು, ಅದನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸೂಚನೆ ನೀಡಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು ಇರುವ, ದಾರಿದೀಪ ಮತ್ತು ನಿರ್ವಹಣೆ ಮಾಡುವ ಬಗ್ಗೆ ಮತ್ತು ನಳ್ಳಿನೀರಿನ ಬಿಲ್ ಮತ್ತು ಲಿಕೇಜ್ ವ್ಯವಸ್ಥೆ ಸಮರ್ಪಕವಾಗಿ ಆಗದಿರುವ ಮತ್ತು ಕೆಲವು ಕಡೆ ಅವೈಜ್ಞಾನಿಕ ಬಿಲ್ ನೀಡಿರುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕರು ಸೂಚನೆ ನೀಡಿದರು. ಮಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಚರ್ಚೆ ನಡೆಸಿದರು.
ಮಂಗಳೂರಿನಲ್ಲಿ ಕಸ ವಿಲೇವಾರಿಯ ಬಗ್ಗೆ ಸಾರ್ವಜನಿಕರಿಗೆ ಆಗುವ ತೊಂದರೆ ಯಾವ ನಿಟ್ಟಿನಲ್ಲಿ ಪರಿಹರಿಸಲು ಸಾಧ್ಯ ಎಂಬ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಒಂದು ಮೀಟರ್ ಅಗಲದ ಚರಂಡಿಯಿಂದ ಹೂಳು ತೆಗೆಯುವ ಕಾಂಟ್ರೆಕ್ಟ್ ಆಂಟೋನಿ ವೇಸ್ಟ್ ಮ್ಯಾನೇಜ್‌ಮೆಂಟ್‌ಗೆ ಇತ್ತು. ಅವರು ತೆಗೆಯದೇ ಇದ್ದ ಕಾರಣ ಮೊನ್ನೆಯ ಮಳೆಯಲ್ಲಿ ಸಾರ್ವಜನಿಕರಿಗೆ ತುಂಬಾ ಕಷ್ಟನಷ್ಟ ಉಂಟಾಗಿದೆ ಎಂದರು.
ಜನನ ಮತ್ತು ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಿಗೆ ನೀಡುವುದರಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿದೆ. ಈ ಮೊದಲು ಇಲ್ಲದ ಸಮಸ್ಯೆಗಳು ಈಗ ಯಾಕೆ ಉದ್ಭವವಾಗುತ್ತಿವೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಪಾಲಿಕೆಯ ಇತರ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು. ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ, ದಿವಾಕರ್ ಪಾಂಡೇಶ್ವರ, ಸುರೇಂದ್ರ, ಪೂರ್ಣಿಮಾ, ಜಯಂತ್ ಆಚಾರ್, ಮಾಜಿ ಸದಸ್ಯ ಭಾಸ್ಕರಚಂದ್ರ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ರಮೇಶ್ ಕಂಡೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಮಳೆ ನೀರಿನಿಂದ ನೆರೆ ಉಂಟಾದ ಪ್ರದೇಶಕ್ಕೆ ಶಾಸಕ ಕಾಮತ್ ಭೇಟಿ
ಮಂಗಳೂರು, ಜೂ.23: ಕುಲಶೇಖರ ವಾರ್ಡ್‌ಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿದರು. ಪರಿಸರದ ಮಳೆ ನೀರಿನಿಂದ ನೆರೆ ಉಂಟಾಗುವ ಪ್ರದೇಶಗಳನ್ನು ಪರಿಶೀಲಿಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಜಯ್ ಪ್ರಭು, ರಮೇಶ್ ಕಂಡೆಟ್ಟು, ಅಜಯ್ಕುಮಾರ್, ಅನಿಲ್ ರಾವ್, ಹರಿಣಿ ಪ್ರೇಮ್ಕುಮಾರ್, ವಸಂತ್ ಜೆ. ಪೂಜಾರಿ, ಮಂಜುಳಾ ರಾವ್, ಪ್ರದೀಪ್, ಏಕನಾಥ್ ಅಮೀನ್, ವಿಶ್ವಜೀತ್, ಪ್ರಕಾಶ್ ಚಂದ್ರ, ದೀಪಕ್‌ಕುಮಾರ್, ಪ್ರಶಾಂತ್ ಡೈರಿ, ನವೀನ್ ಡೈರಿ, ವಸಂತಿ ಆಚಾರ್ಯ, ಶಾಲಿನಿ ಮತ್ತಿತರರಿದ್ದರು.