ಸಿನಿಮಾ, ರಂಗಭೂಮಿ ಪ್ರಭಾವದಿಂದ ಯಕ್ಷಗಾನ ಮೂಲಸ್ವರೂಪ ಕಳೆದುಕೊಂಡಿದೆ: ಎ.ಈಶ್ವರಯ್ಯ

Update: 2018-06-23 17:18 GMT

ಉಡುಪಿ, ಜೂ.23: ಯಕ್ಷಗಾನಕ್ಕೆ ಅದರದೇ ಆದ ಮಟ್ಟು, ಸ್ವರೂಪ ಇತ್ತು. ಆದರೆ ಇಂದು ಸಿನಿಮಾ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದಿಂದ ಪ್ರಭಾವಿತವಾಗಿ ಅದು ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡಿದೆ ಎಂದು ಕಲಾವಿಮರ್ಶಕ, ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಯಕ್ಷರಂಗ ಕಟೀಲುಸಿತ್ಲ ಫೌಂಡೇಶನ್ ಉಡುಪಿ-ಬೆಂಗಳೂರು ಹಾಗೂ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಆವರಣದ ಧ್ವನ್ಯಾಲೋಕ (ಆರ್‌ಆರ್‌ಸಿ)ದಲ್ಲಿ ಕಟೀಲುಸಿತ್ಲ ರಂಗನಾಥ ರಾವ್ ನಿರೂಪಿತ, ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ ರಾಘವ ನಂಬಿಯಾರ್ ಅವರ ರಂಗವಿಚಾರಗಳಿಗೆ ಸಂಬಂಧಿಸಿದ ‘ರಂಗವಿಚಿಕಿತ್ಸೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇಂದು ನಾವು ಕೇಳುತ್ತಿರುವುದು ಯಕ್ಷಗಾನ ಹಾಡುಗಳಲ್ಲ. ಅವು ಶಾಸ್ತ್ರೀಯ ಸಂಗೀತವೇ ಆಗಿದೆ ಎನ್ನಬಹುದು. ಅದೇ ರೀತಿ ನೃತ್ಯವೂ ಯಕ್ಷಗಾನ ಮೂಲದ್ದಲ್ಲ. ಯಕ್ಷಗಾನದಲ್ಲಿ ಇಂದು ವ್ಯಕ್ತಿಯನ್ನು ವೈಭವೀಕರಿಸುವ ಕೆಲಸ ನಡೆಯುತ್ತಿದೆ. ಇನ್ನು ವೃತ್ತಿಪರ ಮೇಳಗಳ ಕುರಿತು ಮಾತನಾಡದಿರುವುದೇ ಉತ್ತಮ ಎಂದವರು ವಿಷಾಧದಿಂದ ನುಡಿದರು.

ಯಕ್ಷಗಾನ ಸುಮಾರು 60-70 ವರ್ಷಗಳ ಹಿಂದೆ ಕಲೆಯಾಗಿರಲ್ಲ. ಅದೊಂದು ಆರಾಧನೆ-ಮನೋರಂಜನಾ ಸಾಧನವಾಗಿತ್ತು. ಯಕ್ಷಗಾನ ಮಹಾಕಾವ್ಯದ ಚೌಕಟ್ಟಿನಲ್ಲಿತ್ತು. ಶಾಸ್ತ್ರೀಯ ಸಂಗೀತ, ಭರತನಾಟ್ಯಗಳಂತೆ ಅದನ್ನು ನಿಯಂತ್ರಿಸುವ ಲಕ್ಷಣ ಗ್ರಂಥಗಳಿರಲಿಲ್ಲ. ಹೀಗಾಗಿ ಇಂದಿನ ಸ್ಥಿತಿ ಎದುರಾಗಿದೆ ಎಂದರು.

ಪ್ರತಿ ಕಲೆಯೂ ಬದಲಾಗಬೇಕಿರುವುದು ಕಾಲದ ಅನಿವಾರ್ಯತೆ. ಆದರೆ ಆ ಬದಲಾವಣೆ ಯಾವ ಸ್ವರೂಪದಲ್ಲಿರಬೇಕು ಎಂಬುದರ ಸ್ಪಷ್ಟ ಅರಿವು, ಕಲ್ಪನೆ ಸಂಬಂಧಿತ ಕಲಾವಿದರಲ್ಲಿರಬೇಕು. ಇಂಥವರ ಹಿಡಿತಕ್ಕೆ ಸಿಕ್ಕದ ಕೆಲವು ಹವ್ಯಾಸಿ ಗಳನ್ನು ಬಳಸಿಕೊಂಡು ಯಕ್ಷಗಾನವನ್ನು ಮೂಲಸ್ವರೂಪಕ್ಕೆ ತರುವ ಪ್ರಯತ್ನ ಈಗ ನಡೆಯಬೇಕು ಎಂದವರು ಸಲಹೆ ನೀಡಿದರು.

ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಮಾತನಾಡಿ, ಬಡಗುತಿಟ್ಟು ಹಾರಾಡಿ ರಾಮಗಾಣಿಗರ ಕಾಲದಿಂದ ಹಾಗೂ ತೆಂಕುತಿಟ್ಟು ಕುರಿಯರ ಕಾಲದಿಂದ ಆಧುನೀಕರಣಗೊಳ್ಳಲು ಪ್ರಾರಂಭಿಸಿತ್ತು. ಆಧುನೀಕರಣ ವೆಂದರೆ ಈಗ ಇರುವ ಚೌಕಟ್ಟಿನೊಳಗೆ ಹೊಸ ಕಾಂತಿ, ಪ್ರಕಾಶವನ್ನು ನೀಡಲು ಪ್ರಯತ್ನಿಸುವುದಾಗಿದೆ. ಆದರೆ ಈಗ ಕಾಣುತ್ತಿರುವ ಮೂಲಸ್ವರೂಪದಲ್ಲಿ ಆಗುವ ಬದಲಾವಣೆಯನ್ನು ಖಂಡಿತ ಒಪ್ಪಲಾಗದು. ಇದು ಶಿಸ್ತಿಗೆ ಒಳಪಡಬೇಕು, ಶಿಸ್ತುಗೆಟ್ಟದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಕಟೀಲುಸಿತ್ಲ ಫೌಂಡೇಷನ್‌ನ ಅಧ್ಯಕ್ಷ ಕಟೀಲು ಸಿತ್ಲ ಭಾಸ್ಕರ ರಾವ್, ಮಂಗಳೂರು ಆಕೃತಿ ಪ್ರಿಂಟ್ಸ್‌ನ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು. ಲೇಖಕ ಕಟೀಲುಸಿತ್ಲ ರಂಗನಾಥ ರಾವ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸುಶ್ಮಿತಾ ಎ.ವಂದಿಸಿದರು. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News