ಹಳೇ ಪಿಂಚಣಿ ಯೋಜನೆ ಜಾರಿಗೆ ಕೋರ್ಟ್ ಮೆಟ್ಟಲೇರಲೂ ಸಿದ್ಧ: ಭೋಜೇಗೌಡ

Update: 2018-06-23 17:22 GMT

ಮೂಡುಬಿದಿರೆ, ಜೂ.23: ನೆನೆಗುದಿಗೆ ಬಿದ್ದಿರುವ ಶಿಕ್ಷಕ ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸದಾ ನಾನು ಸಿದ್ಧನಿದ್ದೇನೆ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ನ್ಯೂ ಪೆನ್ಶನ್ ಸ್ಕೀಂನಿಂದ ಶಿಕ್ಷಕರೂ ಒಳಗೊಂಡಂತೆ ಸರಕಾರಿ ನೌಕರರು ಸಂಕಷ್ಟ ಕ್ಕೀಡಾಗಿರುವುದನ್ನು ಗಮನಿಸಿ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಲ್ಲಿ ಅವಶ್ಯಬಿದ್ದರೆ ಕೋರ್ಟ್ ಮೆಟ್ಟಿಲೇರಲೂ ಸಿದ್ಧ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ಘೋಷಿಸಿದರು.

ಮೂಡುಬಿದಿರೆ ಸಮಾಜಮಂದಿರದ ಸ್ವರ್ಣಮಂದಿರದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ಸಾರ್ವಜನಿಕ ಅಭಿನಂದನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಿಕ್ಷಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಿ ಶಿಕ್ಷಕರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಮುಂದಾಗುತ್ತೇನೆ, ಈಗಿರುವ ಸಮಸ್ಯೆಗಳನ್ನು ಒಂದೇ ವರ್ಷದಲ್ಲಿ ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ಅಧಿಕಾರಿಗಳು ಮಾಡಿರುವ ಎ, ಬಿ, ಸಿ ವಲಯ ವಿಂಗಡನೆ ಮತ್ತು ವರ್ಗಾವಣೆ ಕ್ರಮಗಳು ಹೇಗೆ ಅವೈಜ್ಞಾನಿಕವಾಗಿವೆ ಎಂಬುದನ್ನು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡುವ ಜೊತೆಗೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವೆ ಎಂದು ಅವರು ಶಿಕ್ಷಕರ ಕರತಾಡನಗಳ ನಡುವೆ ಪ್ರಕಟಿಸಿದರು.

ಶುಭಾಶಂಸನೆ: ಅಲಂಗಾರು ಮಹಾಲಿಂಗೇಶ್ವರ ದೇವಳದ ಈಶ್ವರ ಭಟ್, ಕೊರ್ಪುಸ್ ಕ್ರಿಸ್ತಿ ಚರ್ಚ್‌ನ ರೆ ಫಾ ಪೌಲ್ ಸಿಕ್ವೇರಾ, ಮೂಡಬಿದಿರೆ ಟೌನ್ ಮಸೀದಿಯ ಮುಸ್ತಫಾ ಯಮಾನಿ ಎಂ.ಎಫ್.ವೈ. ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಅವರು ‘ ಶಿಕ್ಷಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯ ಸಮಿತಿ ರೂಪಿಸಿ, ಶಿಕ್ಷಕರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು, ಅನುದಾನಿತ ಶಾಲೆಗಳ ನವೀಕರಣಕ್ಕೆ ಕೆಲವು ಅಧಿಕಾರಿಗಳು ಅನಧಿಕೃತವಾಗಿ ಮೊತ್ತ ನಿಗದಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಅಭಿನಂದನ ಭಾಷಣ ಮಾಡಿದ ಕಟೀಲು ಎಸ್‌ಡಿಪಿಟಿ ಕಾಲೇಜಿನ ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ ಅವರು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಭೋಜೇಗೌಡರ ಗಮನ ಸೆಳೆಯುವಂತೆ ಮಾಡಿದರು. ಸಮಸ್ಯೆಗಳಿಗೆ ಪರಿಹಾರ ನೀಡಿವಲ್ಲಿ ಶ್ರಮಿಸಿದರೆ ನಿಮ್ಮನ್ನು ಮತ್ತೊಮ್ಮೆ ಆರಿಸುತ್ತೇವೆ’ ಎಂದರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್ ಶಿಕ್ಷಕರ ವಿವಿಧ ಸಮಸ್ಯೆಗಳ ಬಗ್ಗೆ ಭೋಜೇ ಗೌಡ ಅವರ ಗಮನ ಸೆಳೆದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು ಮಾತನಾಡಿ, ‘ಶಿಕ್ಷಕರ ಪುತ್ರ ಭೋಜೇಗೌಡರು ಹೋರಾಟದ ಮನೋಭಾವದವರು, ಹಿಡಿದ ಕೆಲಸವನ್ನು ತುದಿಮುಟ್ಟಿಸುವ ಛಲಗಾರ. ಅವರಿಂದ ಶಿಕ್ಷಕರು ಖಂಡಿತ ಉತ್ತಮ ಸೇವೆಯನ್ನು ಪಡೆದುಕೊಳ್ಳುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದ.ಕ., ಉಡುಪಿ ಜಿಲ್ಲೆಗಳ ಶಿಕ್ಷಕರೂ ಸೇರಿದಂತೆ ಮೂಡಬಿದಿರೆ ತಾಲೂಕು ಶಿಕ್ಷಕರ ಸಂಘಟನೆಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಭೋಜೇಗೌಡ ಅವರನ್ನು ಗೌರವಿಸಿದರು.

ದಿವಾಕರ ಶೆಟ್ಟಿ ತೋಡಾರು ಸ್ವಾಗತಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಪ್ರವೀಣ್‌ಚಂದ್ರ, ಪೃಥ್ವೀರಾಜ ಶೆಟ್ಟಿ, ಕಿಶೋರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಸುನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮೂಡಬಿದಿರೆ ತಾಲೂಕು ಅಧ್ಯಕ್ಷ ದೇವದಾಸ ಕಿಣಿ ವಂದಿಸಿದರು. ಬಿ. ಪ್ರಭಾತ್‌ಕುಮಾರ್, ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News