ಅಳಿಕೆ ವಲಯ ಕಾಂಗ್ರೆಸ್: ಇವಿಎಂ ನಿಷೇಧಿಸಲು ಆಗ್ರಹಿಸಿ ಅಂಚೆ ಕಾರ್ಡ್ ಚಳುವಳಿಗೆ ಚಾಲನೆ

Update: 2018-06-24 12:12 GMT

ಬಂಟ್ವಾಳ, ಜೂ. 24: ಸೋಲಿನಿಂದ ಕಾರ್ಯಕರ್ತರು ಹಿಂದೆ ಸರಿಯಬಾರದು. ಪಕ್ಷ ಸಂಘಟನೆಗಾಗಿ ಯುವ ಕಾರ್ಯಕರ್ತರನ್ನು ತಯಾರು ಮಾಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾನು ಸೋತ ಎಂಬ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ. ಸದಾ ಜನರೊಡನೆ ಬೆರೆಯುತ್ತೇನೆ. ಪ್ರತಿ ಗ್ರಾಮಗಳಿಗೆ ತಿಂಗಳಿಗೊಮ್ಮೆ ಬೇಟಿ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಕೆಲವರಿಗೆ ಸಮಾಜದ ಅಭಿವೃದ್ಧಿಗಿಂತ ಸುಳ್ಳು ಅಪಪ್ರಚಾರಗಳು ಮುಖ್ಯವಾಗಿದೆ ಎಂದು ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ ಹೇಳಿದ್ದಾರೆ.

ಅವರು ಶನಿವಾರ ಅಳಿಕೆ ಗ್ರಾಮದಲ್ಲಿ ಅಳಿಕೆ ವಲಯ ಕಾಂಗ್ರೆಸ್ ವತಿಯಿಂದ ನಡೆದ ಇವಿಎಂ ಮತಯಂತ್ರ ನಿಷೇಧಿಸುವಂತೆ ಆಗ್ರಹಿಸಿ ಅಂಚೆ ಕಾರ್ಡ್ ಚಳುವಳಿಗೆ ಚಾಲನೆ ನೀಡಿ, ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ ಕಾರಣಕ್ಕೆ ಬಿಜೆಪಿಯವರು ಡಿ.ಕೆ. ಶಿವಕುಮಾರ ವಿರುದ್ಧ ಐಟಿ ದಾಳಿ ನಡೆಸುತ್ತಿದ್ದಾರೆ. ಇಂತಹ ಪೊಳ್ಳು ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಹಾಗೂ ಸುಳ್ಳು ಅಪಪ್ರಚಾರ ನಡೆಸುವ ಮೂಲಕ ಜಯಗಳಿಸಿದ್ದಾರೆ. ಅಭಿವೃದ್ಧಿ ಕಾರ್ಯಕ್ಕಿಂತ ಹಿಂದುತ್ವವೇ ಮುಖ್ಯವಾಗಿದೆ. ನಾವೆಲ್ಲ ಎಲ್ಲಾ ಜನಾಂಗದವರನ್ನು ಒಟ್ಟು ಸೇರಿಸಿ ಸಂಸ್ಕಾರ ಹಾಗೂ ಪರಿಶುದ್ಧ ಭಾರತಿಯರಂತೆ ಬೆಳೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಜಾತ್ಯಾತೀತ ಸಿದ್ಧಾಂತವನ್ನು ಜನರಿಗೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ ಅಳಿಕೆ ಗ್ರಾಮಕ್ಕೆ ಶಕುಂತಳಾ ಶೆಟ್ಟಿ ಅವರು 22 ಕೋಟಿ ರೂ. ಅನುದಾನ ತರುವ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಪ್ರತಿಯೊಬ್ಬರು ಶಕುಂತಳಾ ಶೆಟ್ಟಿಯವರನ್ನು ಬೆಂಬಲಿಸಿದ್ದಾರೆ. ಆದರೆ ಫಲಿತಾಂಶದ ಮೇಲೆ ನಮಗೆ ಹಲವು ನಿರೀಕ್ಷೆ ಇತ್ತು. ಈ ಭಾಗದಲ್ಲಿ ನಿರೀಕ್ಷೆಗಿಂತ ಮತ ಬಂದಿಲ್ಲ. ಇವಿಎಂ ಮತಯಂತ್ರದ ಮೇಲೆ ನಮಗೆ ಸಂಶಯ ಹುಟ್ಟುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅದನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ವಕ್ತಾರ ರಮಾನಾಥ ವಿಟ್ಲ, ವಿಟ್ಲ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ರಮೇಶ್, ಸದಾಶಿವ ಅಳಿಕೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News