×
Ad

ಮಸಾಜ್ ಸೆಂಟರ್ ನಡೆಸಲು ನಿಯಮ ಪಾಲನೆ ಕಡ್ಡಾಯ: ಡಿಸಿಪಿ ಹನುಮಂತರಾಯ

Update: 2018-06-24 18:25 IST

ಮಂಗಳೂರು, ಜೂ.24: ಮಸಾಜ್ ಸೆಂಟರ್ ನಡೆಸಲು ಹಲವು ನಿಯಮಗಳಿದ್ದು, ಹೈಕೋರ್ಟ್ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಸೂಚನೆ ನೀಡಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, 10ರಿಂದ 15 ಮಂದಿ ಹೈಕೋರ್ಟ್‌ನಿಂದ ಆದೇಶ ತಂದು ಮಸಾಜ್ ಸೆಂಟರ್‌ಗಳನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಆಯುರ್ವೇದಿಕ್ ಮಸಾಜ್ ಸೆಂಟರ್‌ಗಳೂ ಇದ್ದು, ಕೆಲವೊಂದು ಸೆಂಟರ್‌ಗಳು ಮೊದಲು ನಿಯಮಕ್ಕೆ ಒಪ್ಪಿಕೊಂಡು ಬಳಿಕ ನಿಯಮ ಪಾಲನೆಗೆ ಮುಂದಾಗುತ್ತಿಲ್ಲ ಎಂದರು.

ಮಸಾಜ್ ಸೆಂಟರ್‌ಗಳಲ್ಲಿ ಸಿಸಿಟಿವಿ, ವೇಳಾಪಟ್ಟಿ, ಸ್ವಚ್ಛತೆ, ಅನೈತಿಕ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ನೀಡಿದೆ ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಕೆಲವರು ಯಾವುದೇ ಬೋರ್ಡ್‌ಗಳನ್ನು ಹಾಕದೆ ಪ್ಲಾಟ್, ಅಪಾರ್ಟ್‌ಮೆಂಟ್, ಮತ್ತು ಅಂತರ್ಜಾಲದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವಂತಹ ಘಟನೆಗಳನ್ನು ಇತ್ತೀಚೆಗೆ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬಹುದು ಎಂದು ಹನುಮಂತರಾಯ ಮನವಿ ಮಾಡಿದರಲ್ಲದೆ, ಮಸಾಜ್ ಸೆಂಟರ್‌ಗಳಿಗೆ ತೆರಳಿ ಆಗಾಗ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ನಿಖರ ಮಾಹಿತಿ ಇದ್ದರೆ ದಾಳಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಅಕ್ರಮ-ಸಕ್ರಮ ಭೂಮಿ ಹೊಂದುವ ವಿಚಾರದಲ್ಲಿ 2000ನೇ ಇಸವಿಯಿಂದ ಸುಂದರಿ ಎಂಬವರಿಗೆ ಮೂಡುಬಿದಿರೆ ವ್ಯಾಪ್ತಿಯ ವಾಲ್ಪಾಡಿ ಗ್ರಾಮದಲ್ಲಿ ಪದೇಪದೇ ಮೇಲ್ವರ್ಗದವರು ಸತಾಯಿಸುತ್ತಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಹೇಳಿ ಅನ್ಯಾಯ ಮಾಡುತ್ತಿದ್ದಾರೆ. ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮವಿಲ್ಲ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಂಕರ್ ಎಂಬವರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಡಿಸಿಪಿ ಹನುಮಂತರಾಯ ಈ ಬಗ್ಗೆ ಸೂಕ್ತ ಕ್ರಮಕ್ಕೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಶ್ವಜ್ಯೋತಿ ಚಾರಿಟೇಬಲ್ ಟ್ರಸ್ಟ್‌ನಿಂದ ರಾಕೇಶ್ ಎಂಬವರು ಮನೆ ಕಟ್ಟಲು ಜಾಗ ನೀಡುವುದಾಗಿ ನಂಬಿಸಿ ಸದಸ್ಯತ್ವಕ್ಕಾಗಿ 265 ಮಂದಿಯಿಂದ ತಲಾ 901 ರೂ. ಪಡೆದು ರಶೀದಿ ನೀಡಿದ್ದಾರೆ. ಈಗ ಜಮೀನು ಕೇಳಿದರೆ ಬೆದರಿಕೆ ಹಾಕುತ್ತಿರುವುದಾಗಿ ವಂಚನೆಗೊಳಗಾದವರು ಸಭೆಯಲ್ಲಿ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಡಿಸಿಪಿ, ಬ್ಯಾಂಕ್ ಮತ್ತು ಸಂಸ್ಥೆಗಳ ನಿಯಮಗಳನ್ನು ಮೊದಲು ಅರ್ಥೈಸಿಕೊಳ್ಳಬೇಕು. ರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಬ್ಸಿಡಿಯಲ್ಲಿ ಸಾಲ ಪಡೆಯಬಹುದು. ನಬಾರ್ಡ್‌ನಂತಹ ಬ್ಯಾಂಕ್‌ಗಳು ಸಹಕಾರಿಯಾಗಿವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಸ್ಸಿ-ಎಸ್ಟಿ ಮುಂಬಡ್ತಿ-ಹಿಂಬಡ್ತಿ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೊಡುತ್ತಿಲ್ಲ ಎಂದು ಪರಮೇಶ್ ಕೊಂಚಾಡಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಎಸ್ಸಿ-ಎಸ್ಟಿ ಮುಂಬಡ್ತಿ-ಹಿಂಬಡ್ತಿ ಜ್ಯೇಷ್ಠತಾ ಪಟ್ಟಿ ನೀಡಿದ್ದು, ಪ್ರಕ್ರಿಯೆಯಲ್ಲಿದೆ. ರಾಷ್ಟ್ರಮಟ್ಟದಲ್ಲಿ ಪರಿಹಾರವಾಗಿದ್ದು, ರಾಷ್ಟ್ರಪತಿಯೂ ಅಂಕಿತ ಹಾಕಿದ್ದಾರೆ. ಆದರೆ ನಮ್ಮಲ್ಲಿ ಕೆಲವರದ್ದು ಜ್ಯೇಷ್ಠತಾ ಪಟ್ಟಿಯಲ್ಲಿದ್ದು, ಇನ್ನೂ ಕೆಲವರದ್ದು ಆಗಬೇಕಿದೆ. ಇವುಗಳನ್ನು ಕೂಲಂಕಷವಾಗಿ ಪರಶೀಲನೆ ಮಾಡುವ ಅಗತ್ಯವಿದೆ ಎಂದರು.

ಮಂಗಳೂರು-ಬಿಜೈ-ಪಂಪ್‌ವೆಲ್ ಮಾರ್ಗವಾಗಿ ಖಾಸಗಿ ಬಸ್‌ಗಳು ರವಿವಾರದಂದು ಚಲಿಸುತ್ತಿಲ್ಲ. ಉಳಿದ ದಿನಗಳಲ್ಲಿ ಬಸ್‌ಗಳು ಚಲಿಸಿದರೂ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ನೀಡುವುದಿಲ್ಲ. ಬಸ್ ರೂಟ್‌ನಲ್ಲಿ ಚಲಿಸದ ಕಾರಣ ಶಾಲಾ ಮಕ್ಕಳಿಗೂ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಕಿಶೋರ್ ದೂರಿದರು. 

ಸಭೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸಿ.ಬಿ.ವೇದಮೂರ್ತಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ, ಉದಯ್ ನಾಯ್ಕಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News