ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ವಿಚಾರ: ಪರಮೇಶ್ವರ್-ಸಿದ್ದರಾಮಯ್ಯ ಸಮಾಲೋಚನೆ
ಬೆಂಗಳೂರು, ಜೂ. 24: ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರೊಂದಿಗೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾಲೋಚನೆ ನಡೆಸಿದ್ದಾರೆ.
ರವಿವಾರ ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ತೆರಳಿದ ಡಿಸಿಎಂ ಡಾ.ಪರಮೇಶ್ವರ್, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಇದೇ ವೇಳೆ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.
ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡಿರುವ ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ. 80ಕ್ಕೂ ಹೆಚ್ಚಿರುವ ನಿಗಮ-ಮಂಡಳಿ ಶೀಘ್ರದಲ್ಲೇ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಆಗುವ ಸಾಧ್ಯತೆಗಳಿವೆ. 80ಕ್ಕೂ ಹೆಚ್ಚಿರುವ ನಿಗಮ-ಮಂಡಳಿಗಳ ಪೈಕಿ 25 ಜೆಡಿಎಸ್‌ಗೆ ಮತ್ತು 55ಕ್ಕೂ ಹೆಚ್ಚು ಕಾಂಗ್ರೆಸ್‌ಗೆ ದೊರೆಯಲಿದ್ದು, ಸಚಿವ ಸ್ಥಾನ ದೊರೆಯದ ಅತೃಪ್ತ ಶಾಸಕರು ಹಾಗೂ ಪಕ್ಷದ ಮುಖಂಡರ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರ ಒಪ್ಪಿಗೆ ಬಳಿಕ ಹೈಕಮಾಂಡ್‌ಗೆ ರವಾನಿಸಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸುವ ಸಂಬಂಧದ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿ ಸಭೆ ನಾಳೆ(ಜೂ.25 ನಡೆಯಲಿದ್ದು, ನಿಗಮ- ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
‘ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಅಲ್ಲದೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಶೀಘ್ರದಲ್ಲೆ ಆಗಲಿದೆ’
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ