ದಲಿತರ ಮೀಸಲು ಭೂಮಿಯಲ್ಲಿ ಅಕ್ರಮ ಕಟ್ಟಡ: ದಸಂಸ ಆರೋಪ
ಉಡುಪಿ, ಜೂ.24: ಬ್ರಿಟಿಷ್ ಆಡಳಿತ ಕಾಲದಿಂದಲೂ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಜಿಲ್ಲಾಡಳಿತ ಏಕಾಎಕಿ ಅತಿಕ್ರಮಣ ಮಾಡಿ ಅನಧಿಕೃತವಾಗಿ ದಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ ಜಿಲ್ಲಾಡಳಿತದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ಮೂಡನಿಡಂಬೂರು ಗ್ರಾಮದ ಬನ್ನಂಜೆಯಲ್ಲಿರುವ ಸರ್ವೆ ನಂಬರ್ 57- ಎಡಬ್ಲು 2ಪಿಐರಲ್ಲಿ ಸುಮಾರು 72 ಸೆನ್ಸ್ ಜಾಗವನ್ನು ಪರಿಶಿಷ್ಟ ಜಾತಿಯ ಶಾಲೆ ಹಾಗೂ ವಸತಿ ನಿಲಯಕ್ಕಾಗಿ ಕಳೆದ 85ವರ್ಷಗಳಿಂದಲೂ ಸರಕಾರ ಕಾದಿರಿಸಿಕೊಂಡು ಬಂದಿದ್ದು ಇದೀಗ ಜಿಲ್ಲಾಡಳಿತ ಏಕಾಎಕಿ ಹಿಂದುಳಿದ ವರ್ಗದ ಹಾಸ್ಟೆಲ್ ನಿರ್ಮಿಸಲು ಕಟ್ಟಡದ ಕಾಮಗಾರಿಯನ್ನು ಪ್ರಾರಂಬಿಸಿರು ವುದು ಇಡೀ ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆಆರೋಪಿಸಿ ದ್ದಾರೆ.
ಈ ಹಿಂದೆ ಇದೇ ಸ್ಥಳದಲ್ಲಿ( 1405-1999) ಜಿಪಂ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ ನಡೆಸಲಾಗಿತ್ತು. ಆದರೆ ಈ ಜಾಗ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಪರಂಬೋಕು ನೀಡಿರುವುದನ್ನು ತಿಳಿದ ಆಗಿನ ಜಿಲ್ಲಾಧಿಕಾರಿ ಗಂಗಾರಾವ್ ಬಡೇರಿಯ ಕಟ್ಟಡ ಕಾಮಗಾರಿಗೆ ತಡೆಯೊಡ್ಡಿದ್ದರು. ಬಳಿಕ 2005ರಲ್ಲಿ ದಿ. ದೇವರಾಜ್ ಅರಸು ಭವನ ನಿರ್ಮಿಸಲು ಕಟ್ಟಡಕ್ಕೆ ಪಂಚಾಗಕ್ಕಾಗಿ ಪಿಲರ್ ಗಳನ್ನು ನಿರ್ಮಿಸಲಾಗಿತ್ತು. ಈ ವಿಷಯವನ್ನು ತಿಳಿದ ದಲಿತ ಸಂಘರ್ಷ ಸಮಿತಿ ಆಗಿನ ಜಿಲ್ಲಾಧಿಕಾರಿ ಶ್ಯಾಮ್ ಭಟ್ ಅವರ ಗಮನಕ್ಕೆ ತಂದಿದ್ದು, ಅವರು ಅರಸು ಭವನದ ಕಾಮಗಾರಿಯನ್ನು ತೆರವುಗೊಳಿಸಿದ್ದರು.
ಜಿಲ್ಲಾಡಳಿತ ತಕ್ಷಣ ಈ ಜಾಗದಿಂದ ಅಕ್ರಮವಾಗಿ ನಿರ್ಮಿಸ ಹೊರಟಿರುವ ಹಾಸ್ಟೆಲ್ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲಾಡಳಿತದ ದಬ್ಬಾಳಿಕೆಯ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ದಸಂಸ ಪ್ರಧಾನ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಸುಂದರ ಗುಜ್ಜರಬೆಟ್ಟು, ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ಗಣೇಶ್ ನೆರ್ಗಿ, ಸಂತೋಷ ಕಪ್ಪೆಟ್ಟು ಹಾಗೂ ಮಂಜುನಾಥ ಕಪ್ಪೆಟ್ಟು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.