ಹೋಟೆಲ್ ಮಾಲಕನಿಗೆ ಬೆದರಿಕೆ, ದಾವೂದ್ ಬಂಟನ ಸೆರೆ

Update: 2018-06-24 15:13 GMT

ಮುಂಬೈ,ಜೂ.24: ಭೂಗತ ಪಾತಕಿ ದಾವೂದ್ ಇಬ್ರಾಹೀಂ ಬಂಟನನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ. ಈತ ಪಾಕಿಸ್ತಾನದಲ್ಲಿಯ ತನ್ನ ಸಹವರ್ತಿಗಳ ಸೂಚನೆಯ ಮೇರೆಗೆ ಇಲ್ಲಿಯ ಹೋಟೆಲ್ಲೊಂದರ ಮಾಲಕನಿಗೆ ಹಫ್ತಾ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ತಿಳಿಸಿದರು.

ರಾಮದಾಸ ರಹಾನೆ(41) ಹೋಟೆಲ್ ಮಾಲಕನ ಮೇಲೆ ದಾಳಿ ನಡೆಸಲು ಪಾಕಿಸ್ತಾನದಿಂದ ಹಣವನ್ನು ಸ್ವೀಕರಿಸಿದ್ದು,ಆತ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾಗ ಮುಂಬೈ ಪೊಲೀಸ್‌ನ ಹಫ್ತಾ ನಿಗ್ರಹ ಘಟಕ(ಎಇಸಿ)ದ ತಂಡದ ಬಲೆಗೆ ಬಿದ್ದಿದ್ದಾನೆ.

50 ಲ.ರೂ.ಗಳ ಹಫ್ತಾ ನೀಡುವಂತೆ ಆಗ್ರಹಿಸಿ ತನಗೆ ಪಾಕಿಸ್ತಾನದಿಂದ ದೂರವಾಣಿ ಕರೆಗಳು ಬರುತ್ತಿವೆ ಮತ್ತು ತಕ್ಷಣವೇ ಐದು ಲ.ರೂ.ಗಳನ್ನು ರಹಾನೆಗೆ ನೀಡುವಂತೆ ಆ ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಹೋಟೆಲ್ ಮಾಲಕ ದೂರಿನಲ್ಲಿ ಆರೋಪಿಸಿದ್ದರು. ರಹಾನೆ ಸಹ ಹೋಟೆಲ್ ಮಾಲಕರಿಗೆ ಕರೆಗಳನ್ನು ಮಾಡಿ ಬೆದರಿಕೆಯನ್ನೊಡ್ಡಿದ್ದ ಎಂದು ಡಿಸಿಪಿ ದಿಲೀಪ್ ಸಾವಂತ್ ಅವರು ಸುದ್ದಿಗಾರರಿಗೆ ತಿಳಿಸಿದರು.

ರಹಾನೆ ಬಂಧನದ ಬಳಿಕ ಅಹ್ಮದ್‌ನಗರ ಜಿಲ್ಲೆಯ ಸಂಗಮನೇರ್‌ನಲ್ಲಿರುವ ಆತನ ಮನೆಯ ಮೇಲೆ ದಾಳಿ ನಡೆಸಲಾಗಿದ್ದು,ಒಂದು ಪಿಸ್ತೂಲು ಮತ್ತು ಎರಡು ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ರಹಾನೆ ವಿರುದ್ಧ ಮುಂಬೈ ಮತ್ತು ಗುಜರಾತ್‌ಗಳಲ್ಲಿ 11ಕ್ಕೂ ಅಧಿಕ ಗಂಭೀರ ಪ್ರಕರಣಗಳಿದ್ದು,ಕ್ರೈಂ ಬ್ರಾಂಚ್ ಹಿಂದೆ ಆತನನ್ನು ಬಂಧಿಸಿತ್ತು.

ರಹಾನೆ 2011,ಫೆಬ್ರುವರಿಯಲ್ಲಿ ಚರ್ಚ್‌ಗೇಟ್‌ನಲ್ಲಿರುವ ಬಿಲ್ಡರ್ ಮನೀಷ್ ಧೋಲಾಕಿಯಾರ ಕಚೇರಿಯ ಮೇಲೆ ಗುಂಡು ಹಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದೂ ಸಾವಂತ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News