ಮಂಗಳೂರು: ಗಾಂಜಾ ಮಾರಾಟ, ಸೇವನೆ ಆರೋಪ; ನಾಲ್ವರು ಸೆರೆ
ಮಂಗಳೂರು, ಜೂ.24: ನಗರದಲ್ಲಿ ಮಾದಕ ದ್ರವ್ಯ ಸಾಗಾಟ, ಮಾರಾಟ, ಸೇವನೆ ವಿಚಾರದಲ್ಲಿ ನಾಲ್ವರು ಆರೋಪಿಗಳನ್ನು ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಶನಿವಾರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕೊಂಚಾಡಿ ದೇರೆಬೈಲ್‌ನ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನ ನಿವಾಸಿಗಳಾದ ಕಾರ್ತಿಕ್‌ರಾಜ್ ಪೂಜಾರಿ(27), ಸಂತೋಷ್(24) ಹಾಗೂ ತಾಲೂಕಿನ ಪದವಿನಂಗಡಿಯ ತಾರಿಪಡ್ಪುವಿನ ನಿವಾಸಿ ರಿತೇಶ್ ಯಾನೆ ರೀತು (27), ಅಶೋಕ್‌ನಗರದ ದಂಬೇಲ್ ಫ್ರೆಂಡ್ಸ್ ಕ್ಲಬ್ ಸಮೀಪದ ವರುಣ್(21) ಬಂಧಿತ ಆರೋಪಿಗಳು.
ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ 250 ಗ್ರಾಂ ತೂಕದ ಗಾಂಜಾ ಹಾಗೂ ಏಳು ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ 17 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಮೊದಲಿಗೆ ಅಶೋಕ್‌ನಗರದ ಶೇಡಿಗುರಿ ದಂಬೇಲ್ ಬಳಿ ಗಾಂಜಾ ಸೇವಿಸುತ್ತಿದ್ದ ಆರೋಪದಲ್ಲಿ ಕಾರ್ತಿಕ್‌ರಾಜ್ ಪೂಜಾರಿ ಮತ್ತು ಸಂತೋಷ್ ಎಂಬವರನ್ನು ಬಂಧಿಸಲಾಯಿತು. ಬಳಿಕ ಪಲ್ಗುಣಿ ನದಿಯ ಬಳಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ರಿತೇಶ್ ಮತ್ತು ವರುಣ್ ಎಂಬವರನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ವಸೀಂ ಅಹ್ಮದ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಕುರಿತು ನಗರದ ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.