ಭಟ್ಕಳ: ಫಿತ್ರ್ ಕಮಿಟಿಯಿಂದ 1914 ಕುಟುಂಬಗಳಿಗೆ 957 ಕ್ವಿಂಟಲ್ ಧಾನ್ಯ ವಿತರಣೆ

Update: 2018-06-24 15:17 GMT

ಭಟ್ಕಳ, ಜೂ. 24: ಈದುಲ್ ಫಿತ್ರ್ ಹಬ್ಬದಂದು ಫಿತ್ರ ಕಮಿಟಿಯಿಂದ ಭಟ್ಕಳ ತಾಲೂಕು ಸೇರಿದಂತೆ ಕುಂದಾಪುರ ತಾಲೂಕಿನ ಕೆಲ ಗ್ರಾಮದ 1914 ಬಡ ಕುಟುಂಬಗಳಿಗೆ 957 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಫಿತ್ರ ಕಮಿಟಿಯ ಸಂಚಾಲಕ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.

ಅವರು ಶನಿವಾರ ಸಂಜೆ ಅಬುಲ್ ಹಸನ್ ಅಲಿ ಅಕಾಡಮಿ ಸಭಾಂಗಣದಲ್ಲಿ ಜರಗಿದ ಫಿತ್ರ ಕಮಿಟಿಯ ಅವಲೋಕನ ಸಭೆಯಲ್ಲಿ ಪ್ರಸ್ತಾವಿಕವಾಗಿ ವಾತನಾಡುತ್ತ ಈ ವಿಷಯ ತಿಳಿಸಿದರು.

ರಮಝಾನ್ ತಿಂಗಳ ಪೂರ್ತಿ ಉಪವಾಸಾಚರಣೆಯ ನಂತರ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತಿದೆ. ಫಿತ್ರ್ ಅಂದರೆ ದಾನವಾಗಿದ್ದು ಬಡವರು ಸಹ ಈದ್ (ಹಬ್ಬದ)ಖುಷಿಯಲ್ಲಿ ಪಾಲ್ಗೊಳ್ಳುವಂತಾಗಲು ಕುಟುಂಬದ ಪ್ರತಿಯೊರ್ವ ಸದಸ್ಯನು ಕಡ್ಡಾಯವಾಗಿ ನೀಡಲೇಬೇಕಾದ ದಾನ ಫಿತ್ರ ಝಕಾತ್ ಅಗಿದ್ದು ಇದನ್ನು ಸಾಮೂಹಿಕವಾಗಿ ಕ್ರೊಢೀಕರಣ ಮಾಡುವ ಕೆಲಸವನ್ನು ಭಟ್ಕಳ ಫಿತ್ರ್  ಕಮಿಟಿ ಕಳೆದ 24 ವರ್ಷಗಳಿಂದ ಮಾಡುತ್ತ ಬಂದಿದ್ದು ಈ ನಿಟ್ಟಿನಲ್ಲಿ ಪ್ರತಿವರ್ಷ ಫಿತ್ರ್ ದಾನ ನೀಡುವವರಲ್ಲಿ ಹೆಚ್ಚಳವಾಗುತ್ತಿದೆ. ತಮ್ಮ ಸಮೀಪದ ಮೊಹಲ್ಲ, ಪಟ್ಟಣ ಕೇರಿಗಳಲ್ಲಿ ವಾಸಿಸುವ ಬಡವರನ್ನು ಗುರುತಿಸಿ ಅವರ ಮನೆಗೆ ಅಕ್ಕಿಯನ್ನು ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದ ಅವರು ಇದಕ್ಕಾಗಿ ಯುವಕರು ತಮ್ಮನ್ನು ತೊಡಗಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದರು.

ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಖ್ಬೂಲ್ ಆಹ್ಮದ್ ಕೋಬಟ್ಟೆ ಮಾತನಾಡಿ, ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸುವಂತಾಗಲು ಇಸ್ಲಾಮ್ ಧರ್ಮ ಕಂಡುಕೊಂಡಂತಹ ದಾರಿ ಫಿತ್ರ್ ದಾನವಾಗಿದೆ ಈ ಮೂಲಕ ಸಮಾಜದ ಕಟ್ಟಕಡೆಯವ ವ್ಯಕ್ತಿಯೂ ಕೂಡ ಹಬ್ಬದ ಸಂತೋಷದಿಂದ ವಂಚಿತನಾಗಕೂಡದು ಎಂಬ ಆಶಯವನ್ನು ಇಟ್ಟುಕೊಳ್ಳಲಾಗಿದೆ. ಸಮೂಹಿಕವಾಗಿ ಮಾಡುವ ಮಾನವ ಸೇವೆಯೂ ಇಸ್ಲಾಮ್ ಧರ್ಮದ ವೈಶಿಷ್ಠ್ಯತೆಗಳಲ್ಲೊಂದಾಗಿದೆ ಎಂದರು.

ತಂಝೀಮ್ ಉಪಾಧ್ಯಕ್ಷ ಮುಹಮ್ಮದ್ ಜಾಫರ್ ಮೊಹತೆಶಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಮೌಲಾನ ಅಬ್ದುಲ್ ಮತೀನ್ ಮುನಿರಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಸಿದ್ದೀಕ್ ಮೀರಾ, ದುಬೈ ಜಮಾಅತ್ ನ ಅಬ್ದುಸ್ಸಮಿ ಕೋಲಾ, ನೋಮಾನ್ ಮತ್ತಿತರರು ಮಾತನಾಡಿದರು.

ಜಾಮೀಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಹಿರಿಯ ಸದಸ್ಯರಾದ ಅಬ್ದುಲ್ ಹಮೀದ್ ಸಾಹೇಬ್, ವೇದಿಕೆಯಲ್ಲಿ ಉಪಸ್ಥಿತಿತರಿದ್ದರು. ಎಸ್.ಎಂ.ಸೈಯ್ಯದ್, ಸೈಯ್ಯದ್ ಪರ್ವೇರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News