ಜೂ. 29: ಮಂಗಳೂರು ವಿವಿಯಲ್ಲಿ ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮ

Update: 2018-06-24 15:20 GMT

ಕೊಣಾಜೆ, ಜೂ. 24: ಮಂಗಳೂರು ವಿಶ್ವವಿದ್ಯಾನಿಲಯವು ವಿವಿಧ ಸ್ನಾತಕೋತ್ತರ ಪದವಿ ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪರಿಚಯಿಸಲು ‘ಕ್ಯಾಂಪಸ್ ನೋಡ ಬನ್ನಿ’(Open House)ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಆವರಣ ಮಂಗಳಗಂಗೋತ್ರಿಯಲ್ಲಿ ಜೂ.29ರಂದು  ವಿಶ್ವವಿದ್ಯಾನಿಲಯ ಗ್ರಂಥಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವನ್ನು ಬೆಳಗ್ಗೆ 9.30 ಗಂಟೆಗೆ ಕರ್ನಾಟಕ ಸರಕಾರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿರುವರು.

ವಿಜ್ಞಾನ, ಮಾನವಿಕ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ ಅಧ್ಯಯನಗಳನ್ನೊಳಗೊಂಡಂತೆ 25 ಸ್ನಾತಕೋತ್ತರ ವಿಭಾಗಗಳ 40 ಸ್ನಾತಕೋತ್ತರ ಪದವಿಗಳ ಬಗ್ಗೆ ವಿದ್ಯಾರ್ಥಿಗಳು, ತಂದೆ ತಾಯಿ ಮತ್ತು ಪೋಷಕರು ಸ್ವತಃ ನೋಡಿ ಪ್ರಾಥಮಿಕ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಕ್ಯಾಂಪಸ್ ನೋಡ ಬನ್ನಿ’ ಎಂಬ ಈ ಕಾರ್ಯಕ್ರಮವನ್ನುವಿಶ್ವವಿದ್ಯಾನಿಲಯವು ಸತತ ನಾಲ್ಕನೇ ವರ್ಷ ಆಯೋಜಿಸುತ್ತಿದೆ.

ವಿದ್ಯಾರ್ಥಿಗಳು ಸ್ನಾತಕೋತ್ತರ ವಿಭಾಗಕ್ಕೆ ಭೇಟಿ ನೀಡಿ ಪ್ರಾಧ್ಯಾಪಕರೊಂದಿಗೆ ಸಮಾಲೋಚಿಸಿ ಅಧ್ಯಯನ ವಿಷಯದ ಪ್ರಾಮುಖ್ಯತೆ ಮತ್ತು ಉದ್ಯೋಗಾವಕಾಶಗಳು, ವಿಭಾಗದ ಸಂಶೋಧನ ಕಾರ್ಯಚಟುವಟಿಕೆಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಗಣಕಯಂತ್ರ ಸೌಲಭ್ಯಗಳ ಕುರಿತಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಲಭ್ಯವಿರುವ ಪ್ರಮುಖ ಸೌಲಭ್ಯಗಳಾದ ಗ್ರಂಥಾಲಯ, ಗಣಕಯಂತ್ರ ಕೇಂದ್ರ, ಅಂತರ್ಜಾಲ ಸೌಲಭ್ಯ, ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಜಿಮ್ನಾಷಿಯಂ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಗೃಹ ವ್ಯವಸ್ಥೆ, ಉಪಾಹಾರ ಗೃಹ, ವಿದ್ಯಾರ್ಥಿ ಕ್ಷೇಮಪಾಲನಾ ಕಛೇರಿ, ಉದ್ಯೋಗ ವಿನಿಮಯ ಕೇಂದ್ರ ಮತ್ತು ರಾಷ್ಟ್ರಮಟ್ಟದ ಆಧುನಿಕ ಸಂಶೋಧನ ಕೆಂದ್ರಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ವಿವಿಧ ಸ್ನಾತಕೋತ್ತರ ವಿಷಯಗಳನ್ನು ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ಆಯಾ ವಿಭಾಗಕ್ಕೆ ಭೇಟಿ ನೀಡಿ ಸಮಾಲೋಚಿಸುವ ಮೂಲಕ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಸಂಬಂಧಪಟ್ಟ ಪದವಿಗಳಿಗೆ ಪ್ರವೇಶಾತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಆಯಾ ವಿಭಾಗಗಳಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News