ನೀರು ಪಾಲಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆ

Update: 2018-06-24 15:30 GMT

ಅಮರಾವತಿ, ಜೂ.24: ಆಂಧ್ರಪ್ರದೇಶದ ಅಮರಾವತಿ ಬಳಿ ಕೃಷ್ಣಾ ನದಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೃತದೇಹಗಳನ್ನು ವ್ಯಾಪಕ ಶೋಧ ಕಾರ್ಯಾಚರಣೆಯ ಬಳಿಕ ಪತ್ತೆಹಚ್ಚಲಾಗಿದೆ.

ಕೃಷ್ಣಾ ಜಿಲ್ಲೆಯ ಕಂಚಿಕಾಚಾರ್ಲ ಎಂಬಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಐದು ಮಂದಿ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದು ಶನಿವಾರ ಸಂಜೆ ಕೃಷ್ಣಾ ಮತ್ತು ಗೋದಾವರಿ ನದಿಗಳು ಸಂಗಮಿಸುವ ಸ್ಥಳದಲ್ಲಿ ನೀರಿಗಿಳಿದಾಗ ಒಬ್ಬ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿದ್ದು ಆತನನ್ನು ರಕ್ಷಿಸಲು ಮುಂದಾದ ಮೂವರೂ ಕೊಚ್ಚಿ ಹೋಗಿದ್ದರು.

ತಕ್ಷಣ ವಿಪತ್ತು ನಿರ್ವಹಣಾ ಪಡೆಯ ತಂಡ, ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರು ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ರವಿವಾರ ಬೆಳಿಗ್ಗೆ ನೌಕಾಪಡೆಯ ಮುಳುಗು ತಜ್ಞರು ವಿದ್ಯಾರ್ಥಿಗಳ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಸಫಲವಾಗಿದ್ದರು. ಮೃತ ವಿದ್ಯಾರ್ಥಿಗಳನ್ನು ಕೃಷ್ಣ ಚೈತನ್ಯ ರೆಡ್ಡಿ, ಶ್ರೀನಾಥ್ ಎನ್, ರಾಜ್‌ಕುಮಾರ್ ಪಿಲ್ಲ ಮತ್ತು ಪ್ರವೀಣ್ ಕೆ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News