ಜಿಎಸ್‌ಟಿ ಅನುಷ್ಠಾನದ ಶ್ರೇಯ ರಾಜ್ಯಗಳಿಗೆ ಸಲ್ಲಬೇಕು: ಮೋದಿ

Update: 2018-06-24 15:32 GMT

ಹೊಸದಿಲ್ಲಿ, ಜೂ.24: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಉತ್ತಮ ನಿದರ್ಶನವಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದಲ್ಲಿ ‘ಇನ್‌ಸ್ಪೆಕ್ಟರ್ ರಾಜ್’ ವ್ಯವಸ್ಥೆಗೆ ಅಂತ್ಯ ಹಾಡಿದ ಪ್ರಾಮಾಣಿಕತೆಯ ಹಬ್ಬವಾಗಿದೆ ಎಂದಿದ್ದಾರೆ. ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಜಾರಿಯಾಗಿ ಒಂದು ವರ್ಷ ಸಂದಿರುವುದನ್ನು ಉಲ್ಲೇಖಿಸಿದ ಅವರು, ಜಿಎಸ್‌ಟಿ ಅನುಷ್ಠಾನದ ಸಂಪೂರ್ಣ ಶ್ರೇಯ ರಾಜ್ಯಗಳಿಗೆ ಸಲ್ಲಬೇಕಿದೆ ಎಂದರು.

 ಎಲ್ಲಾ ರಾಜ್ಯಗಳೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಸರ್ವಾನುಮತದ ನಿರ್ಧಾರದ ಫಲವಾಗಿ ಇಂತಹ ಸುಧಾರಿತ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಮೋದಿ ತಿಳಿಸಿದರು. ಇದುವರೆಗೆ ಜಿಎಸ್‌ಟಿ ಸಮಿತಿಯ 27 ಸಭೆಗಳು ನಡೆದಿದ್ದು ಯಾವುದೇ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗುತ್ತಿದೆ. ಸಭೆಯಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು, ವಿಭಿನ್ನ ಆದ್ಯತೆಗಳಿರುವ ರಾಜ್ಯಗಳು ಪಾಲ್ಗೊಳ್ಳುತ್ತವೆ. ಆದರೂ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗುತ್ತದೆ.

 ಇದು ಜಿಎಸ್‌ಟಿಯ ವೈಶಿಷ್ಟವಾಗಿದೆ. ಜಿಎಸ್‌ಟಿಯು ಸಮಗ್ರತೆಯ ಗೆಲುವಾಗಿರುವಂತೆಯೇ ಪ್ರಾಮಾಣಿಕತೆಯ ಆಚರಣೆಯಾಗಿದೆ. ದೇಶದಲ್ಲಿ ಈ ಹಿಂದೆ ಇದ್ದ ತೆರಿಗೆ ವ್ಯವಸ್ಥೆಯ ಸಂದರ್ಭ ‘ಇನ್‌ಸ್ಪೆಕ್ಟರ್ ರಾಜ್’ ಬಗೆಗಿನ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದವು. ಇನ್‌ಸ್ಪೆಕ್ಟರ್ ಜಾಗದಲ್ಲಿ ಈಗ ಮಾಹಿತಿ ತಂತ್ರಜ್ಞಾನ ಬಂದಿದೆ. ಈ ರೀತಿಯ ಬೃಹತ್ ತೆರಿಗೆ ಸುಧಾರಣಾ ಪ್ರಕ್ರಿಯೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಮಾನ್ಯವಾಗಿ 5ರಿಂದ 10 ವರ್ಷ ಬೇಕಾಗುತ್ತದೆ. ಆದರೆ ನಮ್ಮ ದೇಶದ ಜನರು ಕೇವಲ ಒಂದು ವರ್ಷದಲ್ಲೇ ಜಿಎಸ್‌ಟಿ ವ್ಯವಸ್ಥೆಯನ್ನು ಅಂಗೀಕರಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News