ವಿಂಡ್‌ಶೀಲ್ಡ್‌ನಲ್ಲಿ ಬಿರುಕು: ಬೆಂಗಳೂರು ತೆರಳಲಿದ್ದ ವಿಮಾನ ಕೊಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ

Update: 2018-06-24 15:40 GMT
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ, ಜೂ.24: ಕೊಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಇಂಡಿಗೊ ವಿಮಾನದ ಮುಂದಿನ ಗಾಜಿನಲ್ಲಿ ಬಿರುಕು ಕಂಡುಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಕೊಲ್ಕತ್ತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಗೊಳಿಸಿದ ಘಟನೆ ರವಿವಾರ ನಡೆದಿದೆ.

ಬೆಳಿಗ್ಗೆ 10.34ರ ಸುಮಾರಿಗೆ ಕೊಲ್ಕತ್ತಾದಿಂದ ಹೊರಟ 6ಇ-345 ವಿಮಾನದ ಮುಂದಿನ ಗಾಜಿನಲ್ಲಿ ಬಿರುಕು ಬಿಟ್ಟಿರುವುದನ್ನು ಪೈಲಟ್ ಗಮನಿಸಿ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದರು. ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವನ್ನು ಇಳಿಸಲು ಅವಕಾಶ ಮಾಡಿಕೊಟ್ಟರು. ಸದ್ಯ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೊ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಟ್ ಆ್ಯಂಡ್ ವಿಟ್ನಿ ಇಂಜಿನ್ ಸಮಸ್ಯೆಯಿಂದಾಗಿ ಒಂದೇ ವಾರದಲ್ಲಿ ಇಂಡಿಗೊ ಸಂಸ್ಥೆಯ ನಾಲ್ಕು ವಿಮಾನಗಳು ತಾಂತ್ರಿಕ ದೋಷವನ್ನು ಎದುರಿಸಿವೆ. ಇಂಜಿನ್ ಸಮಸ್ಯೆಯಿಂದಾಗಿ 2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ವರೆಗೆ ಇಂಡಿಗೊ ಮತ್ತು ಗೋಏರ್‌ನ 25 ವಿಮಾನಗಳನ್ನು ತುರ್ತು ಭೂಸ್ಪರ್ಶಗೊಳಿಸಲಾಗಿದೆ. ಜೂನ್ ಮೂರರಂದು ಹಾರಾಟದ ಮಧ್ಯದಲ್ಲೇ ಇಂಜಿನ್ ಸ್ತಬ್ಧಗೊಂಡ ಪರಿಣಾಮ 183 ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ರಾಜಧಾನಿಯ ವಿಮಾನ ನಿಲ್ದಾಣಕ್ಕೆ ವಾಪಸ್ ಬರುವಂತೆ ಸೂಚಿಸಲಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಇಂಡಿಗೊ ಸಂಸ್ಥೆಯ ವಕ್ತಾರ, ರಾಂಚಿಯ ಘಟನೆಯನ್ನು ಹೊರತುಪಡಿಸಿದರೆ ಉಳಿದೆಲ್ಲ ಸಮಸ್ಯೆಗಳು ಸಣ್ಣ ಪ್ರಮಾಣದ್ದಾಗಿದ್ದು ವಿಮಾನಗಳಲ್ಲಿ ದಿನನಿತ್ಯ ನಡೆಯುವಂತವುಗಳೇ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News