ಪ್ರತಿಭಟನೆ ಹಿನ್ನೆಲೆ, ‘ಇಸ್ಲಾಮಿಕ್ ಭಯೋತ್ಪಾದನೆ’ ಬಗೆಗಿನ ಕೋರ್ಸ್ ಕೈಬಿಟ್ಟ ಜೆಎನ್‌ಯು

Update: 2018-06-24 15:45 GMT

ಹೊಸದಿಲ್ಲಿ, ಜೂ.24: ಅಲ್ಪಸಂಖ್ಯಾತ ಸಂಸ್ಥೆಗಳು, ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಕೋರ್ಸ್ ಆರಂಭಿಸುವ ನಿರ್ಧಾರವನ್ನು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಕೈಬಿಟ್ಟಿದೆ.

“ನಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯು ಅಧಿಕಾರಿಗಳು ಇಸ್ಲಾಮಿಕ್ ಭಯೋತ್ಪಾದನೆ ಕೋರ್ಸ್ ಆರಂಭಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ನಮಗೆ ನೀಡಿರುವ ದಾಖಲೆಗಳಲ್ಲಿ ಅದು ಪ್ರಸ್ತಾವಿತ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರದ ಪಠ್ಯಕ್ರಮದ ಭಾಗವಾಗಿದೆ” ಎಂದು ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಝಫರುಲ್ ಇಸ್ಲಾಂ ಖಾನ್ ತಿಳಿಸಿದ್ದಾರೆ. ಜನರ ಗುಂಪುಗಳು ಯಾವ ರೀತಿ ವಿವಿಧ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಕೋರ್ಸ್ ಆರಂಭಿಸಬೇಕು ಎಂಬ ಸಲಹೆಯನ್ನು ಆಯೋಗ ನೀಡಿದೆ. ಪ್ರಸ್ತಾವಿತ ಕೋರ್ಸ್ ವಿವಿಧ ಧರ್ಮಗಳ ಬಗ್ಗೆ ವಿವರಿಸಬೇಕೇ ವಿನಃ ಒಂದೆರಡು ಧರ್ಮಕ್ಕೆ ಸೀಮಿತವಾಗಬಾರದು. ಈ ಕೋರ್ಸ್‌ನಲ್ಲಿ ಅವರು ಉಗ್ರವಾದ ಇತ್ಯಾದಿಗಳ ಕುರಿತು ಮಾತನಾಡಬಹುದು ಎಂದು ಖಾನ್ ತಿಳಿಸಿದ್ದಾರೆ.

ಪ್ರಸ್ತಾವಿತ ಅಧ್ಯಯನ ಕೇಂದ್ರವು ಒಂದು ಉತ್ತಮ ಕ್ರಮ ಎಂದು ತಿಳಿಸಿದ ಖಾನ್, ಇಸ್ಲಾಮಿಕ್ ಉಗ್ರವಾದವನ್ನು ಒಂದು ಸಂಶೋಧನೆ ಮತ್ತು ಶಿಕ್ಷಣದ ವಿಷಯವಾಗಿಸುವುದು ಲೋಪಯುಕ್ತವಾಗಿದ್ದು ವಿಶ್ವವಿದ್ಯಾಲಯದ ಒಳಗೆ ಹಾಗೂ ಹೊರಗೆ ಕೋಮು ವಾತಾವರಣವನ್ನು ಹಾಳುಗೆಡವಬಹುದು ಮತ್ತು ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆ ಮೂಡಿಸಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News