ಹೆಣಗಳು ಕೆಡದಿರಲು ಬಳಸುವ ರಾಸಾಯನಿಕ ಮೀನುಗಳಿಗೂ ಬಳಕೆ !

Update: 2018-06-24 15:54 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಜೂ.24: ಮೀನುಗಳನ್ನು ಕೆಡದಂತೆ ಬಹುಕಾಲ ರಕ್ಷಿಸಲು ವಿಷಕಾರಿ ರಾಸಾಯನಿಕ ವಸ್ತುವಾದ ಫಾರ್ಮಾಲಿನ್‌ನಲ್ಲಿ ಬೆರೆಸಿ ಇಡುತ್ತಿರುವುದನ್ನು ರಾಜ್ಯದ ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪಾಲಕ್ಕಾಡ್‌ನ ಚೆಕ್‌ಪೋಸ್ಟ್‌ನಲ್ಲಿ ರವಿವಾರ ವಿಷಕಾರಿ ರಾಸಾಯನಿಕದಲ್ಲಿ ಬೆರೆಸಿ ರಾಜ್ಯದೊಳಗೆ ತರುತ್ತಿದ್ದ 6,000 ಕಿ.ಗ್ರಾಂ. ನಷ್ಟು ಮೀನುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಆಸ್ಪತ್ರೆಗಳ ಶವಾಗಾರದಲ್ಲಿ ಹೆಣಗಳನ್ನು ಕೆಡದಂತೆ ಇಡಲು ಫಾರ್ಮಾಲಿನ್ ರಾಸಾಯನಿಕವನ್ನು ಬಳಸಲಾಗುತ್ತದೆ. ಇದೊಂದು ವಿಷಕಾರಿ ರಾಸಾಯನಿಕವಾಗಿದ್ದು ಇದರಲ್ಲಿ ಮೀನುಗಳನ್ನು ಬೆರೆಸಿ ಇಟ್ಟರೆ ಹಲವು ದಿನ ಹಾಳಾಗುವುದಿಲ್ಲ. ‘ಆಪರೇಷನ್ ಸಾಗರ್‌ರಾಣಿ’ ಎಂಬ ಗುಪ್ತನಾಮದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಕೇರಳದ ಉತ್ತರದಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಸಂದರ್ಭ ಫಾರ್ಮಾಲಿನಲ್ಲಿ ಬೆರೆಸಿಡಲಾದ 6,000 ಕಿ.ಗ್ರಾಂ. ನಷ್ಟು ಮೀನುಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದಿಂದ ಕೇರಳಕ್ಕೆ 45 ಲಾರಿಗಳಲ್ಲಿ 6,000 ಕಿ.ಗ್ರಾಂ. ಸಿಗಡಿ ಮೀನುಗಳನ್ನು ತರಲಾಗುತ್ತಿತ್ತು ಇವನ್ನು ಫಾರ್ಮಾಲಿನ್‌ನಲ್ಲಿ ಬೆರೆಸಿ ಇಡುವ ಮೂಲಕ ಸುದೀರ್ಘ ಅವಧಿಯವರೆಗೆ ತಾಜಾ ಆಗಿ ಉಳಿಸಲಾಗುತ್ತಿತ್ತು. ವಶಕ್ಕೆ ಪಡೆಯಲಾದ ಮೀನುಗಳನ್ನು ಇನ್ನಷ್ಟು ಪರೀಕ್ಷೆಗಾಗಿ ಎರ್ನಾಕುಳಂ ಜಿಲ್ಲೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜಂಟಿ ಆಹಾರ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯನ್ನು ಕೋಝಿಕೋಡ್, ಎರ್ನಾಕುಳಂ ಮತ್ತು ಪಾಲಕ್ಕಾಡ್ ಆಹಾರ ಸುರಕ್ಷತಾ ವಿಭಾಗದ 15 ಸದಸ್ಯರ ತಂಡ ಭಾಗವಹಿಸಿತ್ತು. ಕಳೆದ ವಾರ ಕೇರಳದಲ್ಲಿ ನಡೆಸಿದ್ದ ದಾಳಿ ಮತ್ತು ಕಾರ್ಯಾಚರಣೆ ಸಂದರ್ಭ ಫಾರ್ಮಾಲಿನ್ ಅಂಶ ಇರುವ 12,000 ಕಿ.ಗ್ರಾಂ. ಪ್ರಮಾಣದ ವಿಷಕಾರಿ ಮೀನುಗಳನ್ನು ವಶಕ್ಕೆ ಪಡೆಯಲಾಗಿದೆ. ‘ಕೇಂದ್ರ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆ’ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಬಳಸಿ ನಡೆಸಲಾದ ಪ್ರಾಥಮಿಕ ತನಿಖೆಯ ಸಂದರ್ಭ ಈ ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನು, ಹಣ್ಣು ಹಂಪಲು ಹಾಗೂ ಇತರ ಖಾದ್ಯ ವಸ್ತುಗಳನ್ನು ಸುದೀರ್ಘ ಕಾಲದವರೆಗೆ ತಾಜಾ ಆಗಿಡಲು ಫಾರ್ಮಾಲಿನ್‌ನಂತಹ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು ಇದು ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ರಾಜ್ಯದಲ್ಲಿ ನಡೆಸಿದ್ದ ದಾಳಿಯಲ್ಲಿ ಅಧಿಕಾರಿಗಳು ಒಟ್ಟು 12,000 ಕಿ.ಗ್ರಾಂ. ನಷ್ಟು ವಿಷಕಾರಿ ಅಂಶ ಹೊಂದಿದ ಮೀನುಗಳನ್ನು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

ಕಠಿಣ ಕ್ರಮ: ಸಚಿವೆ ಎಚ್ಚರಿಕೆ

ರಾಸಾಯನಿಕ ಮಿಶ್ರಿತ ಮೀನುಗಳನ್ನು ರಾಜ್ಯದೊಳಗೆ ತರುವ ಅಥವಾ ಅವನ್ನು ಮಾರಾಟ ಮಾಡುವ ಪ್ರಕರಣ ಕಂಡುಬಂದಲ್ಲಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಎಚ್ಚರಿಸಿದ್ದಾರೆ.

ವಿಷಕಾರಿ ರಾಸಾಯನಿಕದ ಅಂಶ ಇರುವ ಮೀನುಗಳನ್ನು ಹೊರ ರಾಜ್ಯದಿಂದ ತರಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಚಿವೆ ನೀಡಿದ ಆದೇಶದ ಅನ್ವಯ ಅಧಿಕಾರಿಗಳು ಇದೀಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News