ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ: ‘ನೈದಿಲೆ’ ಕಿರುಚಿತ್ರಕ್ಕೆ ಪ್ರಶಸ್ತಿ

Update: 2018-06-24 16:23 GMT

ಉಡುಪಿ, ಜೂ.24: ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್, ಕರ್ನಾಟಕ ಚಲನಚಿತ್ರ ಅಕಾಡೆಮಿ, ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಸತೀಶ್ ಎನ್. ನಿರ್ದೇಶನದ ‘ನೈದಿಲೆ’ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪ್ರಶಾಂತ್ ಕುಲಾಲ್ ನಿರ್ದೇಶನದ ‘ಸಾವಿನ ಮುಖ’ ಎರಡನೆ ಹಾಗೂ ರಾಜೇಶ್ ಪಕ್ಕಲ ನಿರ್ದೇಶನದ ‘ಉರ್ಲು’ ಮೂರನೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ-ಆಸೀಫ್ (‘ಅಣತಿಮ್ಮ’ ಕಿರುಚಿತ್ರ), ಛಾಯಾಗ್ರಾಹಕ- ಭುವನೇಶ್ ಪ್ರಭು(‘ಸಾವಿನ ಮುಖ’), ಸಂಕಲನಕಾರ- ಸುಹಾನ್ ಶೆಣೈ(‘ಶ್..ಮತ್ತೆ ಬರುವೆ’), ಸಂಗೀತ- ಗುರುರಾಜ್ ಎಂ.ಬಿ.(‘ಅನುಮಾನ’), ನಟ- ರೋಹಿತ್(‘ಅಣತಿಮ್ಮ’), ನಟಿ- ಸ್ವರಾಜ ಲಕ್ಷ್ಮೀ(ನೈದಿಲೆ), ಕಥೆ, ಚಿತ್ರಕಥೆ- ಸಂದೀಪ್ ಕಾಮತ್(ಕೆ ಫಾರ್ ಕರ್ತವ್ಯ), ಅತ್ಯುತ್ತಮ ಪೋಷಕ ನಟ- ರವೀಂದ್ರ ನಾಯ್ಕೆ(ಕಲಾ ಕಾರ್), ಭಾಸ್ಕರ್ ಮಣಿಪಾಲ(ಜಾತಿ ಪ್ರೀತಿ), ರಾಮಾಂಜಿ(ರಿಯಲ್ ಹೀರೋಸ್) ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಿನೆಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು ಅವರಿಗೆ ಯುವ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟಿ ಶಿಲ್ಪಾ ಸುವರ್ಣ, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಚಲನಚಿತ್ರ ನಿರ್ದೇಶಕ ರಂಜಿತ್ ಸುವರ್ಣ, ಚಿತ್ರನಟಿ ಜೆನಿಫರ್ ಸ್ನೇಹ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀಝ ಹುಸೇನ್, ಶೇಖರ್ ಅಜೆಕಾರ್, ತ್ರಿಶೂಲ್ ಶೆಟ್ಟಿ, ಪ್ರೇಮ್ ಶೆಟ್ಟಿ ಉಪಸ್ಥಿತರಿದ್ದರು. ದಿಶಾ ಕಮ್ಯುನಿಕೇಷನ್ಸ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಿರುಚಿತ್ರೋತ್ಸವ ಉದ್ಘಾಟನೆ: ಮೂರನೆ ಕರಾವಳಿ ಕಿರುಚಿತ್ರೋತ್ಸವವನ್ನು ಉದ್ಯಮಿ ಸಖಾರಾಮ್ ಶೆಟ್ಟಿ ದೆಂದೂರು ಉದ್ಘಾಟಿಸಿದರು.

ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ವಿಜೇತ ನೃತ್ಯನಿರ್ದೇಶಕ ವೃಜ ಕಿಶೋರ್ ಆಚಾರ್ಯ ಅವರನ್ನು ಸನ್ಮಾನಿಸ ಲಾಯಿತು.

ಉದ್ಯಮಿ ಅರ್ನಾಲ್ಡ್ ಡಿಸಿಲ್ವ, ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್ ಶೆಟ್ಟಿ ದೆಂದೂರು, ಬೆಳ್ಳಿ ಸಾಕ್ಷಿ ಉಡುಪಿ ಜಿಲ್ಲಾ ಘಟಕದ ನಿಕಟಪೂರ್ವ ಸಂಚಾಲಕ ಪ್ರೇಮಾನಂದ ಕಲ್ಮಾಡಿ, ಕನ್ನಡ ಚಿತ್ರ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ, ನವೀನ್ ಅಮೀನ್ ಶಂಕರಪುರ, ಯಶೋಧ ಕೇಶವ್ ಮುಖ್ಯ ಅತಿಥಿಗಳಾಗಿದ್ದರು. ಬಳಿಕ 10 ಮಂದಿ ಯುವ ನಿರ್ದೇಶಕರ 10 ಕಿರುಚಿತ್ರಗಳ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News