ಅವೈಜ್ಞಾನಿಕ ವಾಹನ ವಿಮೆ ನೀತಿ: ಸರಕಾರ ಗಮನ ಹರಿಸುವಂತೆ ರಿಕ್ಷಾ ಚಾಲಕರ ಮನವಿ

Update: 2018-06-24 16:24 GMT

 ಉಡುಪಿ, ಜೂ.24: ಅವೈಜ್ಞಾನಿಕ ವಾಹನ ವಿಮೆ ನೀತಿ, ಪರ್ಮಿಟ್ ಸಮಸ್ಯೆ ಗಳು, ಅವ್ಯವಸ್ಥಿತ ನಿಲ್ದಾಣಗಳು, ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯ ಗಳಿಂದ ರಿಕ್ಷಾ ಚಾಲಕರು ವಂಚಿತರಾಗಿರುವುದು ಸೇರಿದಂತೆ ರಿಕ್ಷಾ ಚಾಲಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸುವಂತೆ ಇಂದು ನಡೆದ ಉಡುಪಿ ಶಾರದಾ ಆಟೋ ಯೂನಿಯನ್ ರಿಕ್ಷಾ ಚಾಲಕ ಮಾಲಕ ಸಂಘದ ಎಂಟನೆ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಬನ್ನಂಜೆ ಮನವಿ ಮಾಡಿದರು.

ಮಹಾಸಭೆಯನ್ನು ಉದ್ಘಾಟಿಸಿದ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಸಂಘಟನೆಯ ಸದಸ್ಯರು ನಿಸ್ವಾರ್ಥ ರೀತಿಯಲ್ಲಿ ಕೆಲಸ ಮಾಡಿದರೆ ಪ್ರತಿಫಲ ನಿರೀಕ್ಷಿಸಲು ಅರ್ಹರು. ರಿಕ್ಷಾ ಚಾಲಕರು ಇಂದಿಗೂ ಸಮಾಜಕ್ಕಾಗಿ ದುಡಿಯುವವರು. ಅವರ ಶಕ್ತಿಯ ಬಗ್ಗೆ ಅವರಿಗೆ ಅರಿವಿಲ್ಲ. ಆದರೆ ಸಮಾಜ ಅವರ ಸಂಘಟನಾ ಶಕ್ತಿಯನ್ನು ಗುರುತಿಸಿದೆ ಮತ್ತು ವಿಶೇಷ ವಾದ ಸ್ಥಾನವನ್ನು ನೀಡಿದೆ ಎಂದು ಹೇಳಿದರು.

ಉಡುಪಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಮಾತನಾಡಿ, ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ರಿಕ್ಷಾ ಚಾಲಕ ಮಾಲಕರು ತಮ್ಮ ಕುಟುಂಬ ಗಳೊಂದಿಗೆ ಬೆರೆತು ಸೌಹಾರ್ದ ಸಂಬಂಧ ಏರ್ಪಡಿಸಲು ವರ್ಷಕೊಮ್ಮೆ ಚಾಲಕ ಮಾಲಕರ ಕೌಟುಂಬಿಕ ಸಮಾವೇಶವನ್ನು ಆಯೋಜಿಸುವ ಯೋಚನೆ ಯನ್ನು ಹಾಕಿಕೊಳ್ಳಲಾಗಿದೆ. ಸಂಘಟನೆಯ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ರಿಕ್ಷಾ ಚಾಲಕ ಮಾಲಕರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತ ನಾಡಿ, ರಸ್ತೆಯಲ್ಲಿ ಬದುಕು ಸಾಗಿಸುವ ರಿಕ್ಷಾ ಚಾಲಕ ಮಾಲಕರು ರಸ್ತೆ ಅಫಘಾತ ಗಳು ಸಂಭವಿಸಿದಾಗ ಜೀವರಕ್ಷರ ಹಾಗೆ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ರಘುನಂದ ಪರ್ಕಳ ವಾರ್ಷಿಕ ವರದಿಯನ್ನು ಮತ್ತು ಕೋಶಾಧಿಕಾರಿ ಸತೀಶ್ ಪೂಜಾರಿ ಲೆಕ್ಕ ಪತ್ರದ ವರದಿಯನ್ನು ವಾಚಿಸಿದರು. ಜಿಲ್ಲಾ ಆಟೋ ಚಾಲಕ ಮಾಲಕ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ ಅಮೀನ್ ಮಣಿಪಾಲ, ಸಂಘಟನೆಯ ಪ್ರಮುಖರಾದ ಸುರೇಶ ಶೆಟ್ಟಿಗಾರ್, ಸುರೇಶ, ಅಬ್ದುಲ್ ಹಮೀದ್, ದಾಮೋದರ್ ಆಚಾರ್ಯ, ಪ್ರಭಾಕರ್ ಪೂಜಾರಿ, ಮ್ಯಾಕ್ಸಿಮ್ ಮೆನೆಜಸ್, ಶಂಕರ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News