ಸೌದಿ ಅರೇಬಿಯಾದಲ್ಲಿ ಕುಸಿದು ಆಸ್ಪತ್ರೆಗೆ ದಾಖಲಾದ ಉಳ್ಳಾಲದ ವ್ಯಕ್ತಿ

Update: 2018-06-24 16:36 GMT

ಮಂಗಳೂರು, ಜೂ. 24: ಉಳ್ಳಾಲದ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದ ಅಲ್‌ಬಹಾ ಎಂಬಲ್ಲಿ ಕ್ರಿಕೆಟ್ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ವಾರದ ಹಿಂದೆ ನಡೆದಿದ್ದು, ಇದೀಗ ಮನೆಮಂದಿಯು ಯುವಕನನ್ನು ಊರಿಗೆ ಕರೆತರಲು ಸಚಿವ ಯು.ಟಿ.ಖಾದರ್‌ರ ಮೊರೆ ಹೊಗಿದ್ದಾರೆ.

ಉಳ್ಳಾಲದ ಮಾಸ್ತಿಕಟ್ಟೆಯ ಯು.ಕೆ. ಇಸ್ಮಾಯೀಲ್-ಹವ್ವಮ್ಮ ದಂಪತಿಯ ಏಕೈಕ ಪುತ್ರ ರಹ್ಮತುಲ್ಲಾ (40) ಆಸ್ಪತ್ರೆಗೆ ದಾಖಲಾದವರು. ಇವರು ರಿಯಾದ್‌ನಲ್ಲಿ ಗ್ಲಾಸ್ ಡಿಸೈನಿಂಗ್ ಕೆಲಸ ಮಾಡುತ್ತಿದ್ದಾರೆ. ಇವರ ಅನೇಕ ಗೆಳೆಯರು ರಿಯಾದ್‌ನಿಂದ ಸುಮಾರು 1,300 ಕಿ.ಮೀ. ದೂರವಿರುವ ಅಲ್ ಬಹಾದಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಆಚರಿಸಲು ಅಲ್‌ಬಹಾಕ್ಕೆ ತೆರಳಿದ್ದರು. ಹಬ್ಬವನ್ನು ಅತ್ಯಂತ ಸಂತೋಷವಾಗಿಯೇ ಆಚರಿಸಿದ್ದ ರಹ್ಮತುಲ್ಲಾ ಜೂ.16ರಂದು ಸ್ನೇಹಿತರ ಜೊತೆಗೂಡಿ ಕ್ರಿಕೆಟ್ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ರಹ್ಮತುಲ್ಲಾರನ್ನು ಸ್ಥಳೀಯ ಕಿಂಗ್ ಫಹಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಒಂದು ವಾರವಾದರೂ ಕೂಡ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ವೈದ್ಯರ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಸಚಿವ ಖಾದರ್ ರವಿವಾರ ರಹ್ಮತುಲ್ಲಾರ ಮನೆಗೆ ತೆರಳಿ ಹೆತ್ತವರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ರಹ್ಮತುಲ್ಲಾರನ್ನು ಊರಿಗೆ ಕರೆತರಲು ಸೂಕ್ತ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಂದಹಾಗೆ, ರಹ್ಮತುಲ್ಲಾ ತನ್ನ 18ನೆ ವರ್ಷಕ್ಕೇ ಗಲ್ಫ್‌ಗೆ ತೆರಳಿದ್ದರು. ಕಳೆದ 22 ವರ್ಷದಿಂದ ಅಲ್ಲೇ ಉದ್ಯೋಗದಲ್ಲಿರುವ ಅವರು 3 ವರ್ಷದ ಹಿಂದೆ ಊರಿಗೆ ಬಂದು ಕೆಲಕಾಲ ಇದ್ದು ಮತ್ತೆ ಗಲ್ಫ್‌ಗೆ ಮರಳಿದ್ದರು. ಇದೀಗ ಬಕ್ರೀದ್‌ಗೆ ಮುನ್ನ ಊರಿಗೆ ಬರುವವರಿದ್ದರು. ಅದರೆ ಇದೀಗ ಕುಸಿದು ಬಿದ್ದು ದೇಹದ ಬಲಪಾರ್ಶ್ವವು ಸಂಪೂರ್ಣ ಬಲಕಳಕೊಂಡು ಆಸ್ಪತ್ರೆಗೆ ದಾಖಲಾಗಿರುವುದು ಮನೆ ಮಂದಿಯನ್ನು ಆತಂಕಕ್ಕೀಡು ಮಾಡಿದೆ.

ರಹ್ಮತುಲ್ಲಾರ ತಂದೆ-ತಾಯಿ,ಅಕ್ಕ-ತಂಗಿಯರಲ್ಲದೆ, ಪತ್ನಿ ಮತ್ತು ಇಬ್ಬರು ಮಕ್ಕಳು ಕೂಡಾ ಕಣ್ಣಾರೆ ಕಾಣಲು ಕಾತರರಾಗಿದ್ದಾರೆ. ಅಲ್ಲದೆ ಆರೋಗ್ಯಯುತವಾಗಿ ಊರಿಗೆ ಮರಳಲಿ ಎಂದು ಆಶಿಸುತ್ತಿದ್ದಾರಲ್ಲದೆ, ಊರಲ್ಲೇ ಚಿಕಿತ್ಸೆ ಕೊಡಿಸಲು ಉತ್ಸುಕರಾಗಿದ್ದಾರೆ. ಈ ಮಧ್ಯೆ ರಹ್ಮತುಲ್ಲಾರ ಸ್ನೇಹಿತ ತಲಪಾಡಿಯ ಸುರೇಶ್ ಎಂಬವರು ಕೆಲಸಕ್ಕೆ ರಜೆ ಹಾಕಿ ರಹ್ಮತುಲ್ಲಾರ ಆರೈಕೆಯಲ್ಲಿ ತೊಡಗಿಸಿಕೊಂಡಿರುವುದು ಮನೆ ಮಂದಿಗೆ ಕೊಂಚ ನೆಮ್ಮದಿ ನೀಡಿದೆ.

ಆದಾಗ್ಯೂ ಸಚಿವ ಖಾದರ್ ಹಾಗೂ ಸೌದಿ ಅರೇಬಿಯಾದಲ್ಲಿರುವ ದ.ಕ.ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ವಹಿಸಿ ರಹ್ಮತುಲ್ಲಾರನ್ನು ಊರಿಗೆ ಕಳುಹಿಸಿಕೊಡುವ ಬಗ್ಗೆ ಪ್ರಯತ್ನಿಸಬೇಕು ಎಂದು ಮನೆ ಮಂದಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News