ತಾರತಮ್ಯ ಮಾಡಿದ್ದರೆ ಬಿಜೆಪಿಯ ಒಬ್ಬ ಮಂತ್ರಿಯೂ ಮಾತನಾಡಲಿಲ್ಲ ಏಕೆ?

Update: 2018-06-24 17:38 GMT

ಶ್ರೀನಗರ, ಜೂ.24: ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಮ್ಮು ಮತ್ತು ಲಡಾಕ್ ಪ್ರದೇಶದ ಬಗ್ಗೆ ತಾರತಮ್ಯ ನೀತಿ ಅನುಸರಿಸಿದ್ದರು ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮುಫ್ತಿ, ಈ ಆರೋಪವು ಸಂಪೂರ್ಣ ಸುಳ್ಳು. ಅದು ನಿಜವಾಗಿದ್ದರೆ ಇಷ್ಟರವರೆಗೆ ಬಿಜೆಪಿಯ ಯಾವ ಮಂತ್ರಿ ಕೂಡಾ ಈ ಬಗ್ಗೆ ಯಾಕೆ ಮಾತನಾಡಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ-ಬಿಜೆಪಿ ಮೈತ್ರಿ ಆಡಳಿತದ ಅವಧಿಯಲ್ಲಿ ನಡೆದ ಪ್ರತಿಯೊಂದು ಬೆಳವಣಿಗೆ ಕೂಡಾ ಎರಡು ಪಕ್ಷಗಳ ಮಧ್ಯೆ ಮೈತ್ರಿ ನಡೆದಾಗ ಒಪ್ಪಲಾಗಿದ್ದ ಸಿದ್ಧಾಂತದ ಪ್ರಕಾರವೇ ನಡೆದಿತ್ತು ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕ ರಾಮ ಮಾಧವ್ ಜೊತೆ ಸೇರಿ ರೂಪಿಸಲಾಗಿದ್ದ ಮತ್ತು ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಸಮ್ಮತಿಸಿದ್ದ ಮೈತ್ರಿ ಸಿದ್ಧಾಂತದ ಬಗ್ಗೆ ನಮ್ಮ ಬದ್ಧತೆಯು ಎಂದೂ ಕಡಿಮೆಯಾಗಿರಲಿಲ್ಲ. ಇದೀಗ ಅವರದ್ದೇ ಸಿದ್ಧಾಂತವನ್ನು ನಿರಾಕರಿಸಿ ಅದನ್ನು ನಮ್ಮ ಮೃದು ಧೋರಣೆ ಎಂದು ಹಣೆಪಟ್ಟಿ ಕಟ್ಟುವ ನಡೆಯು ಖೇದಕರ ಎಂದು ಮುಫ್ತಿ ತಿಳಿಸಿದ್ದಾರೆ.

370ನೇ ವಿಧಿಯ ಯಥಾಸ್ಥಿತಿ ಕಾಪಾಡುವಿಕೆ, ಪಾಕಿಸ್ತಾನ ಮತ್ತು ಹುರಿಯತ್ ಜೊತೆ ಮಾತುಕತೆ ನಮ್ಮ ಮೈತ್ರಿ ಸಿದ್ಧಾಂತದ ಭಾಗವಾಗಿತ್ತು. ಮಾತುಕತೆಯನ್ನು ಪ್ರೋತ್ಸಾಹಿಸುವುದು, ಕಲ್ಲೆಸೆತಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ ಏಕಪಕ್ಷೀಯ ಕದನ ವಿರಾಮ ಈ ಪ್ರಾಂತದ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಅಗತ್ಯವಿದ್ದ ಕ್ರಮಗಳಾಗಿದ್ದವು. ಅದನ್ನು ಗಮನಿಸಿದ ಬಿಜೆಪಿ ಅದಕ್ಕೆ ಸಮ್ಮತಿಯನ್ನೂ ನೀಡಿತ್ತು ಎಂದಾಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News