ನೀರವ್ ಮೋದಿಗೆ ಇ-ಮೇಲ್ ಮೂಲಕ ಡಿಆರ್‌ಐನಿಂದ ಬಂಧನ ವಾರಂಟ್ ಜಾರಿ

Update: 2018-06-24 17:41 GMT

ಹೊಸದಿಲ್ಲಿ,ಜೂ.24: ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಐಆರ್)ವು ಪಿಎನ್‌ಬಿ ವಂಚನೆ ಪ್ರಕರಣದ ರೂವಾರಿ,ತಲೆ ಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಗೆ ಸೀಮಾಸುಂಕ ವಂಚನೆ ಆರೋಪದಲ್ಲಿ ಬಂಧನ ವಾರಂಟ್‌ನ್ನು ಇ-ಮೇಲ್ ಮೂಲಕ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಗುಜರಾತ್‌ನ ಸೂರತ್‌ನಲ್ಲಿಯ ನ್ಯಾಯಾಲಯದ ಮುಂದೆ ಹಾಜರಾಗುವಲ್ಲಿ ವಿಫಲಗೊಂಡಿದ್ದರಿಂದ ಅದು ಈ ವಾರಂಟ್‌ನ್ನು ಹೊರಡಿಸಿತ್ತು.

ಸುಂಕಮುಕ್ತ ಆಮದಿತ ಸರಕುಗಳನ್ನು ನಿಯಮಗಳನ್ನು ಉಲ್ಲಂಘಿಸಿ ಇತರ ಉದ್ದೇಶಗಳಿಗೆ ಬಳಸಿಕೊಂಡಿದ್ದಕ್ಕಾಗಿ ಮೋದಿ ಮತ್ತು ಸೂರತ್‌ನ ವಿಶೇಷ ಆರ್ಥಿಕ ವಲಯ(ಎಸ್‌ಇಝಡ್)ದಲ್ಲಿರುವ ಅವರ ಮೂರು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಗಳನ್ನು ಡಿಆರ್‌ಐ ಮಾರ್ಚ್‌ನಲ್ಲಿ ಆರಂಭಿಸಿತ್ತು.

 ನಿಯಮಗಳಂತೆ ಎಸ್‌ಇಝಡ್‌ನಲ್ಲಿರುವ ಸಂಸ್ಥೆಗಳು ಕಚ್ಚಾವಸ್ತುಗಳನ್ನಾಗಿ ಬಳಸಿಕೊಳ್ಳಲು ಮತ್ತು ವೌಲ್ಯವರ್ಧನೆಯ ಬಳಿಕ ಅವುಗಳನ್ನು ರಫ್ತು ಮಾಡುವದಿದ್ದರೆ ಮಾತ್ರ ಸುಂಕಮುಕ್ತ ಸರಕುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಮೋದಿ ಒಡೆತನದ ಸಂಸ್ಥೆಗಳು ಈ ನಿಯಮದಡಿ 890 ಕೋ.ರೂ.ವೌಲ್ಯದ ಉನ್ನತ ಗುಣಮಟ್ಟದ ವಜ್ರಗಳು ಮತ್ತು ಮುತ್ತುಗಳನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಂಡು,ಬಳಿಕ ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ 52 ಕೋ.ರೂ.ಗಳ ಸುಂಕವನ್ನು ವಂಚಿಸಿವೆ ಎಂದು ಅಧಿಕಾರಿಗಳು ತಿಳಿಸಿದರು. ಆಮದು ಸುಂಕವನ್ನು ವಂಚಿಸಲು ಮೋದಿ ಕಳಪೆ ಗುಣಮಟ್ಟದ ವಜ್ರಗಳು ಮತ್ತು ಮತ್ತುಗಳನ್ನು ರಫ್ತು ಮಾಡಿ, ಇವುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಬಳಿಕ ವೌಲ್ಯವರ್ಧನೆ ಮಾಡಲಾಗಿದೆ ಎಂದು ಇಲಾಖೆಗೆ ತಿಳಿಸಿದ್ದರು ಎಂದು ಅಧಿಕಾರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News