ಪುತ್ತೂರು: ಸಂಪೂರ್ಣ ಹದಗೆಟ್ಟ ಸಾಜ ಹಸಂತಡ್ಕ ರಸ್ತೆ; ದುರಸ್ತಿಗೆ ಮನವಿ

Update: 2018-06-24 17:59 GMT

ಪುತ್ತೂರು,ಜೂ.24: ಬುಳೇರಿಕಟ್ಟೆಯಿಂದ ಸಾಜ ಮಾರ್ಗವಾಗಿ ತೋರಣಕಟ್ಟೆ ಮೂಲಕ ಕಾಸರಗೋಡು ತಲುಪುವ ರಸ್ತೆಯು ಸಾಜ ಕ್ರಾಸ್ ಆರಂಭದಲ್ಲಿ 1 ಕಿ.ಮೀ ಮತ್ತು ಹಸಂತಡ್ಕ ಸೇತುವೆಯ ಮುಂದೆ ಸಂಪೂರ್ಣ ಹದಗಟ್ಟಿದ್ದು, ಸುಮಾರು 20 ವರ್ಷಗಳಿಂದ ದುರಸ್ಥಿ ಕಾಣದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ವರ್ಷ ಈ ರಸ್ತೆಯ ಮಧ್ಯ ಭಾಗದಲ್ಲಿ ಹಿಂದಿನ ಶಾಸಕಿಯಾಗಿದ್ದ ಶಕುಂತಲಾ ಶೆಟ್ಟಿಯವರು ಸುಮಾರು 2 ಕೋಟಿ ವೆಚ್ಚದಲ್ಲಿ ಡಾಮರೀಕರಣ ಮಾಡಿಸಿದ್ದು, ಆದರೆ ಇನ್ನುಳಿದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಸಂಸದರು, ಜಿ.ಪಂ., ತಾ.ಪಂ, ಹಾಗೂ ಗ್ರಾ.ಪಂ. ನಾಯಕರು ಇದರ ಬಗ್ಗೆ ಗಮನ ಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 9 ವರ್ಷಗಳಿಂದ ಜಿಲ್ಲೆಯೆ ಸಂಸದರು ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಎಲೆಕ್ಷನ್ ಸಮಯದಲ್ಲಿ ಮಾತ್ರ ಈ ಕಡೆ ಬರುತ್ತಿದ್ದಾರೆ ಎಂದು ಆರೋಪಿಸುವ ಗ್ರಾಮಸ್ಥರು, ಓಟ್ ಕೇಳುವುದು ಮಾತ್ರ ಸಂಸದರ ಕೆಲಸವೇ ಎಂದು ಪ್ರಶ್ನಿಸುತ್ತಾರೆ.

ಸಾರ್ಯದಿಂದ ಪ್ರಾಥಮಿಕ ವಿದ್ಯಾಭ್ಯಾಸ ಕಳೆದು ಹೈಸ್ಕೂಲ್ ವಿಧ್ಯಾಭ್ಯಾಸಕ್ಕಾಗಿ ಬಸ್ಸಿನ ಸೌಕರ್ಯವಿಲ್ಲದೆ 5 ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಇಲ್ಲಿನ ವಿಧ್ಯಾರ್ಥಿಗಳದ್ದಾಗಿದೆ. ರಸ್ತೆಯ ದುರವಸ್ಥೆಯಿಂದಾಗಿ ವಾಹನ ಚಾಲಕರು ಈ ರಸ್ತೆಯ ಮೂಲಕ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಬಡವರ್ಗದವರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಅತ್ಯಾವಶ್ಯಕವಾಗಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಕೂಡಾ ಬಹಳಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.  

ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಈ ಪ್ರದೇಶಕ್ಕೆ ಭೇಟಿಕೊಟ್ಟು ತಕ್ಷಣವೇ ಇಲ್ಲಿನ ರಸ್ತೆಯನ್ನು ದುರಸ್ಥಿಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News