ಟರ್ಕಿ ಚುನಾವಣೆಯಲ್ಲಿ ಎರ್ದೊಗಾನ್ ಪುನರಾಯ್ಕೆ

Update: 2018-07-23 06:00 GMT

ಅಂಕಾರ, ಜೂ.25: ರಿಸೆಪ್ ತಯ್ಯಿಪ್ ಎರ್ದೊಗಾನ್ ಮುಂದಿನ ಐದು ವರ್ಷಗಳ ಅವಧಿಗೆ ಟರ್ಕಿಯ ಅಧ್ಯಕ್ಷರಾಗಿ ಮರು ಚುನಾಯಿತರಾಗಿದ್ದಾರೆ.
‘‘ದೇಶದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಶೇ.50ಕ್ಕೂ ಅಧಿಕ ಮತ ಪಡೆದಿರುವ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೊಸ ಜನಾದೇಶ ಪಡೆದಿದ್ದಾರೆ’’ ಎಂದು ಟರ್ಕಿ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥರು ತಿಳಿಸಿದ್ದಾರೆ.

99 ಶೇ. ಮತ ಎಣಿಕೆ ನಡೆದಿದ್ದು 53 ಶೇ. ಮತ ಪಡೆದಿರುವ ಎರ್ದೊಗಾನ್ ಸ್ಪಷ್ಟ ಬಹುಮತ ಪಡೆದಿದ್ದಾರೆ. ಪ್ರತಿಸ್ಪರ್ಧಿ ಮುಹರ್ರಿಮ್ ಇನ್ಸ್ 31 ಶೇ. ಮತ ಪಡೆದಿದ್ದಾರೆ ಎಂದು ವರದಿಯಾಗಿದೆ. ಫಲಿತಾಂಶ ಏನೇ ಬಂದರೂ ತಮ್ಮ ಪ್ರಜಾಪ್ರಭುತ್ವ ಹೋರಾಟ ಮುಂದುವರಿಯಲಿದೆ ಎಂದು ವಿಪಕ್ಷಗಳು ಹೇಳಿವೆ. 64ರ ಹರೆಯದ ಎರ್ದೊಗಾನ್ ರಾಜಧಾನಿ ಅಂಕಾರದಲ್ಲಿರುವ ಪಕ್ಷದ ಮುಖ್ಯ ಕಚೇರಿಯ ಬಾಲ್ಕನಿಯಲ್ಲಿ ವಿಜಯೋತ್ಸವದ ಭಾಷಣ ಮಾಡಿದ್ದಾರೆ.

‘‘ನನ್ನ ದೇಶದ ಎಲ್ಲ 81 ಮಿಲಿಯನ್ ಪ್ರಜೆಗಳು ಈ ಚುನಾವಣೆಯ ವಿನ್ನರ್ ಆಗಿದ್ದಾರೆ’’ ಎಂದು ಹೇಳಿದ್ದಾರೆ. ಎರ್ದೊಗಾನ್ ಹಾಗೂ ಅವರ ಪಕ್ಷ ಎಕೆ ಪಾರ್ಟಿಯ ಬೆಂಬಲಿಗರು ಇಸ್ತಾಂಬುಲ್‌ನ ರಸ್ತೆಗಳಲ್ಲಿ ವಿಜಯೋತ್ಸವ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News