×
Ad

ಮುರಿದು ಬಿದ್ದ ಮಂಗಳೂರು-ಬಂಟ್ವಾಳ ಸಂಪರ್ಕಿಸುವ ಫಲ್ಗುಣಿ ಸೇತುವೆ

Update: 2018-06-25 19:06 IST

ಬಂಟ್ವಾಳ, ಜೂ. 25: ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿದ ಪರಿಣಾಮ ಬಂಟ್ವಾಳ ಮತ್ತು ಮಂಗಳೂರು ಸಂಪರ್ಕದ ಮುಲಾರಪಟ್ನದ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 38 ವರ್ಷದ ಹಳೇ ಸೇತುವೆಯ ಎರಡು ಸ್ಯಾಬ್‍ಗಳು ಸೋಮವಾರ ಸಂಜೆ ಕುಸಿದುಬಿದ್ದಿದೆ. ಆದರೆ ಈ ದುರಂತಕ್ಕೆ ಅಕ್ರಮ ಮರಳುಗಾರಿಕೆಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಘಟನೆಯು ಸೋಮವಾರ ಸಂಜೆ ಸುಮಾರು 6.15ಕ್ಕೆ ಘಟನೆ ನಡೆದಿದೆ ಎನ್ನಲಾಗಿದ್ದು, ಸೇತುವೆ  ಕುಸಿಯುವ ಮುನ್ನ ಬಂಟ್ವಾಳದಿಂದ ಆದ್ಯಪಾಡಿ ಕಡೆಗೆ ತೆರಳುವ ಬಸ್ ಸೇತುವೆ ದಾಟಿದ ಕಾರಣ ಭಾರಿ ಅನಾಹುತವೊಂದು ತಪ್ಪಿದ್ದು, ಯಾವುದೇ ಅಪಾಯ ಸಂಭವಿಸಿದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.

ಅಲ್ಲದೆ, ಮಂಗಳೂರು ಉತ್ತರ ಕ್ಷೇತ್ರಕ್ಕೆ ಸೇರಿದ ಭಾಗದ ಎರಡನೆ ಮತ್ತು ಮೂರನೆ ಪಣ ಕುಸಿದುಬಿದ್ದಿದೆ. ಬಂಟ್ವಾಳ ಕ್ಷೇತ್ರದ ಭಾಗವೂ ಬಿರುಕುಬಿಟ್ಟಿದೆ.
ಬಂಟ್ವಾಳ ಸೋರ್ನಾಡು ಮೂಲಕ ಮಂಗಳೂರು ಕುಪ್ಪೆಪದವು ಕೈಕಂಬ, ಕಟೀಲು, ಇರುವೈಲು, ಎಡಪದವು, ಗಂಜಿಮಠ, ಸುರತ್ಕಲ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕದ ಕೊಂಡಿಯಾಗಿದ್ದ ಮುಲಾರಪಟ್ನ ಈ ಸೇತುವೆ ಕುಸಿದು ಬಿದ್ದಿದ್ದು, ಈ ಭಾಗದ ಜನರಿಗೆ ಸಂಪರ್ಕ ಕಡಿತಗೊಂಡಿದೆ.

1979ನೆ ಇಸವಿಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಹಳೇ ತಂತ್ರಜ್ಞಾನದಲ್ಲಿ ಕಟ್ಟಲಾಗಿದೆ. ಎಡಪದವು-ಕುಪ್ಪೆಪದವು, ಅರಳ ಸೊರ್ನಾಡಿನ ಜಿಲ್ಲಾ ಮುಖ್ಯರಸ್ತೆಯ ಕಿ.ಮೀ. 7.40ರಲ್ಲಿ ಬರುವ ಮೂಲರಪಟ್ನ ಎಂಬಲ್ಲಿ ಬಂಟ್ವಾಳದ ಗಡಿಭಾಗದ ಮಂಗಳೂರು ತಾಲೂಕಿನ ವ್ಯಾಪ್ತಿಗೊಳಪಡುವ ಸೇತುವೆಯಾಗಿದೆ. 

ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಸೇತುವೆಯು 176.40 ಮೀಟರ್ ಉದ್ದ, 20 ಮೀಟರ್ ಅಗಲ, 8 ಪಿಲ್ಲರ್‍ಗಳನ್ನೊಳಗೊಂಡಿದೆ. ಈ ಸೇತುವೆಯನ್ನು ಅಂದಿನ ಮುಖ್ಯಮಂತ್ರಿಯಾದ ಗುಂಡೂರಾವ್ ಅವರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಈ ಸೇತುವೆಯನ್ನು ಇದುವರೆಗೂ ಅಧಿಕೃತವಾಗಿ ಉದ್ಘಾಟನೆ ಮಾಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪಿಲ್ಲರ್ ಗಳು ಶಿಥಿಲಗೊಂಡದ್ದೇ ಕುಸಿತಕ್ಕೆ ಕಾರಣ ಎಂದು ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಘಟನೆ ಬಳಿಕ ಮುತ್ತೂರು ಕೊಳವೂರು ಮತ್ತು ಬಡಗಬೆಳ್ಳೂರು ಭಾಗಗಳಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದೀಗ ಸೇತುವೆಯ ಮಂಗಳೂರು ಮತ್ತು ಬಂಟ್ವಾಳ ಕಡೆ ಎರಡೂ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಪ್ರತಿನಿತ್ಯ ಇಲ್ಲಿ ಸುಮಾರು 15ರಷ್ಟು ಬಸ್‍ಗಳ ಸಂಚಾರ ಹಾಗೂ ನೂರಾರು ವಾಹನಗಳು ಸಂಚರಿಸುತ್ತವೆ ಎಂದು ತಿಳಿದುಬಂದಿದೆ.

ಬಂಟ್ವಾಳ ಭಾಗದಿಂದ ಪೊಳಲಿ ಕಡೆಗೆ ತೆರಳುವವರು ಈ ರಸ್ತೆಯನ್ನೂ ಅವಲಂಬಿಸಿದ್ದು, ಗುರುಪುರ ಕಡೆಯಿಂದ ಬಂಟ್ವಾಳಕ್ಕೆ ಬರಲೂ ಈ ರಸ್ತೆ ಅನುಕೂಲವಾಗುತ್ತಿದ್ದವು. ಸ್ಥಳೀಯರಿಗೆ ಕೊಳತ್ತಮಜಲು ಪೊಳಲಿ ಸಂಪರ್ಕಿಸುವ ತೂಗುಸೇತುವೆಯಿದ್ದು, ಇದರಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಇದರಿಂದ ಅರಳ, ಮುತ್ತೂರು, ಮೂಲರಪಟ್ನ ಭಾಗದ ಜನರು ಇದೇ ರಸ್ತೆಯ ಮೂಲಕ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೇತುವೆ ಕುಸಿತದ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡತೊಡಗಿದಂತೆ ಎರಡೂ ಪಾರ್ಶ್ವಗಳಲ್ಲಿ ಜನರು ಜಮಾಯಿಸತೊಡಗಿದರು. 

ಭೇಟಿ-ಪರಿಶೀಲನೆ: 

ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಸ್ಥಳಕ್ಕೆ ಭೇಟಿ ನೀಡಿದರು. ಬಂಟ್ವಾಳ ತಹಶೀಲ್ದಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಗ್ನಿಶಾಮಕ ದಳದ ಅಧಿಕಾರಿಗಳು, ಗ್ರಾಮಾಂತರ ಠಾಣೆ ಎಸ್ಸೈ ಪ್ರಸನ್ನ, ಟ್ರಾಫಿಕ್ ಎಸ್ಸೈ ಯಲ್ಲಪ್ಪ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಉಮೇಶ ಅರಳ, ಉದಯ ಕುಮಾರ್ ರಾವ್, ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು.

ಸೇತುವೆ ಮತ್ತೆ ನಿರ್ಮಿಸಲು ಮಳೆಗಾಲ ಮುಗಿದ ಬಳಿಕವಷ್ಟೇ ಸಾಧ್ಯ. ಹೀಗಾಗಿ ಬದಲಿ ವ್ಯವಸ್ಥೆಯ ಕುರಿತು ತಾನು ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಚರ್ಚಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಸಹಕರಿಸಬೇಕು. 
ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ಶಾಸಕ 

ಮುಲಾರಪಟ್ನ ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ "ದ.ಕ. ಜಿಲ್ಲೆಯಲ್ಲಿ ನಿಷೇಧದ ನಡುವೆಯೂ ಮರುಳುಗಾರಿಕೆ-ಅಪಾಯದಲ್ಲಿ ಸೇತುವೆಗಳು" ಎಂಬ ಶೀರ್ಷಿಕೆಯಡಿ 'ವಾರ್ತಾಭಾರತಿ' ಪತ್ರಿಕೆಯು ಕಳೆದ ಅಕ್ಟೋಬರ್ 12ರಂದು ಇದರ ಬಗ್ಗೆ ಸುದೀರ್ಘ ವರದಿಯೊಂದನ್ನು ಪ್ರಕಟಿಸಿತ್ತು. ಅಧಿಕಾರಿಗಳ ಕಣ್ಣೆದುರಲ್ಲೇ ಪ್ರಾಕೃತಿಕ ಸಂಪತ್ತಿನ ಲೂಟಿ ಹಾಗೂ ಫಲ್ಗುಣಿ ಸೇತುವೆಯ ಪಿಲ್ಲರ್‌ಗಳು ಶಿಥಿಲಾವ್ಯವಸ್ಥೆಯಲ್ಲಿದೆ ಎಂದು ಜಿಲ್ಲಾಧಿಕಾರಿ, ಅಧಿಕಾರಿಗಳನ್ನು ವರದಿಯ ಮೂಲಕ ಎಚ್ಚರಿಸಿತ್ತು. ಆದರೆ, ಈ ಬಗ್ಗೆ ಗಂಭೀರತೆ ವಹಿಸದಿರುವ ಅಧಿಕಾರಿಗಳ ನಿರ್ಲಕ್ಷವೇ ಘಟನೆಗೆ ಕಾರಣ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News