ಚೀನಾವನ್ನು ಹಿಂದಿಕ್ಕಿ ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತ್ಯಂತ ಎತ್ತರದ ರೈಲು ಮಾರ್ಗ
ಹೊಸದಿಲ್ಲಿ, ಜೂ.25: ಪ್ರಸ್ತಾವಿತ 498 ಕಿ.ಮೀ. ಉದ್ದದ ಹಾಗೂ 3,300 ಮೀಟರ್ ಎತ್ತರದಲ್ಲಿರುವ ಬಿಲಾಸ್ಪುರ್-ಮನಾಲಿ-ಲೇಹ್ ರೈಲ್ವೆ ಮಾರ್ಗ ಕಾರ್ಯಾರಂಭಗೊಂಡಾಗ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆಯಲ್ಲದೆ ಚೀನಾದ ಖ್ವಿಂಗ್‍ಹೈ ಟಿಬೆಟ್ ರೈಲ್ವೆ ಮಾರ್ಗಕ್ಕಿಂತಲೂ ಎತ್ತರವಾಗಲಿದೆ.
ಭಾರತ ಚೀನಾ ಗಡಿ ಸನಿಹದಲ್ಲಿ ಭಾರತೀಯ ರೈಲ್ವೆ ನಿರ್ಮಿಸುತ್ತಿರುವ ನಾಲ್ಕು ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ಇದು ಒಂದಾಗಿದೆ. ಈ ಪ್ರದೇಶದಲ್ಲಿ ಪ್ರಸ್ತಾಪಿಸಲಾಗಿರುವ ಇತರ ರೈಲ್ವೆ ಮಾರ್ಗಗಳೆಂದರೆ ಮಿಸ್ಸಮರಿ-ತೆಂಗ ತವಂಗ್ (378 ಕಿಮೀ), ಉತ್ತರ ಲಖೀಂಪುರ-ಬಮೆ (249 ಕಿಮೀ) ಹಾಗೂ ಪಸಿಘಾತ್-ತೇಝಿ-ಪರಸುರಾಮ್ ಕುಂಡ್-ರುಪೈ (227 ಕಿಮೀ). ಅತೀ ಕಡಿಮೆ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಸೇನಾ ಪಡೆ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಲು ಈ ರೈಲ್ವು ಮಾರ್ಗಗಳು ಪೂರಕವಾಗಲಿವೆ.
ಒಟ್ಟು ಎರಡು ಲಕ್ಷ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಳ ಸ್ಥಳ ಸಮೀಕ್ಷೆ ಸದ್ಯ ನಡೆಯುತ್ತಿದ್ದು, ಯೋಜನೆಯ ಅಂತಿಮ ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಭಾರತೀಯ ರೈಲ್ವೆ ಮಾರ್ಚ್ 2020ರೊಳಗಾಗಿ ಸಲ್ಲಿಸಲಿದೆ. ಈ ನಾಲ್ಕು ಪ್ರಸ್ತಾವಿತ ರೈಲು ಮಾರ್ಗಗಳ ಒಟ್ಟು ಉದ್ದ 1,350 ಕಿಮೀ ಎಂದು ಅಂದಾಜಿಸಲಾಗಿತ್ತಾದರೂ ತವಂಗ್ ರೈಲ್ವೆ ಮಾರ್ಗದ ಉದ್ದವನ್ನು 377 ಕಿ.ಮೀ.ನಿಂದ 170 ಕಿ.ಮೀ.ಗೆ ಸುರಂಗಗಳನ್ನು ನಿರ್ಮಿಸುವ ಮೂಲಕ ಇಳಿಸಲು ನಿರ್ಧರಿಸಲಾಗಿದೆ. ಈ ರೈಲು ಮಾರ್ಗದಲ್ಲಿ 30 ಕಿಮೀ ಉದ್ದದ ಸುರಂಗವಿರಲಿದ್ದು, ಪ್ರತಿ ಕಿಮೀ ಉದ್ದದ ಸುರಂಗಕ್ಕೆ 100 ಕೋಟಿ ರೂ. ವೆಚ್ಚವಾಗಲಿದೆ.
ಈ ಯೋಜನೆಗಳಿಗೆ ಸುರಕ್ಷತೆಗೆ ಸಂಬಂಧಿಸಿದ ಸಂಪುಟ ಸಮಿತಿಯು ಡಿಸೆಂಬರ್ 2015ರಲ್ಲಿ ಅನುಮೋದನೆ ನೀಡಿತ್ತು. ಪ್ರಸ್ತುತ ನಡೆಯುತ್ತಿರುವ ಸ್ಥಳ ಸಮೀಕ್ಷೆಗಾಗಿ ರೈಲ್ವೆಯು ಅತ್ಯಾಧುನಿಕ ತಂತ್ರಜ್ಞಾನಗಳಾದ ಫೊಟೋಗ್ರಾಮೆಟ್ರಿ, ಡ್ರೋನ್ ಸಮೀಕ್ಷೆ ಹಾಗೂ ಡಿಜಿಟಲ್ ಎಲವೇಶನ್ ಮಾದರಿ ಬಳಸುತ್ತಿದೆ.