ಎಟಿಎಂ ಕಾರ್ಡ್, ಪಿನ್ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲವೇ? ಇಲ್ಲಿದೆ ಪರಿಹಾರ....

Update: 2018-06-25 13:58 GMT

ಇತ್ತಿಚಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಎಸ್‌ಬಿಐ ಡೆಬಿಟ್ ಕಾರ್ಡ್ ಪ್ರಕರಣದ ಬಗ್ಗೆ ನಿಮಗೆ ಗೊತ್ತಿರಬೇಕು. ಬೆಂಗಳೂರಿನ ಮಾರತಹಳ್ಳಿ ನಿವಾಸಿ ವಂದನಾ 2013 ನವೆಂಬರ್‌ನಲ್ಲಿ ಹೆರಿಗೆ ರಜೆಯಲ್ಲಿದ್ದಾಗ ತನ್ನ ಎಸ್‌ಬಿಐ ಖಾತೆಯಿಂದ 25,000 ರೂ.ಗಳನ್ನು ಹಿಂಪಡೆಯಲು ತನ್ನ ಎಟಿಎಂ ಕಾರ್ಡ್‌ನ್ನು ಪತಿ ರಾಜೇಶ ಕುಮಾರ್‌ಗೆ ನೀಡಿದ್ದರು. ರಾಜೇಶ ಕುಮಾರ ಎಟಿಎಮ್‌ನಿಂದ ಹಣ ಪಡೆಯಲು ಪ್ರಯತ್ನಿಸಿದಾಗ ಯಂತ್ರವು ಹಣವನ್ನು ವಿತರಿಸಿರಲಿಲ್ಲ,ಆದರೆ ವಂದನಾರ ಬ್ಯಾಂಕ್ ಖಾತೆಯಲ್ಲಿ 25,000 ರೂ.ಗಳ ಖರ್ಚು ಬಿದ್ದಿತ್ತು. ದಂಪತಿ ಈ ಬಗ್ಗೆ ಬ್ಯಾಂಕಿಗೆ ದೂರು ಸಲ್ಲಿಸಿದ್ದರಾದರೂ ವಂದನಾ ತನ್ನ ಎಟಿಎಂ ಪಿನ್ ಅನ್ನು ಪತಿಯೊಂದಿಗೆ ಹಂಚಿಕೊಂಡಿದ್ದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಅದು ದೂರನ್ನು ತಿರಸ್ಕರಿಸಿತ್ತು.

2014,ಅಕ್ಟೋಬರ್‌ನಲ್ಲಿ ದಂಪತಿ ಬೆಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು. ಮೂರೂವರೆ ವರ್ಷಗಳ ಬಳಿಕ ಕಳೆದ ಮೇ ತಿಂಗಳಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದ ಅದು ಕೂಡ ಬ್ಯಾಂಕಿನ ನಿಲುವನ್ನೇ ಎತ್ತಿ ಹಿಡಿದು ಅವರ ದೂರನ್ನು ವಜಾಗೊಳಿಸಿತ್ತು. ಕೊನೆಗೂ ದಂಪತಿ 25,000 ರೂ.ಗಳನ್ನು ಕಳೆದುಕೊಂಡಿದ್ದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ತಜ್ಞರು ವೇದಿಕೆಯು ಹಲವಾರು ಅಂಶಗಳನ್ನು ಪರೀಶೀಲಿಸುವಲ್ಲಿ ವಿಫಲಗೊಂಡಿದೆ. ಪ್ರಕರಣದ ತಿರುಳನ್ನು ನೋಡದೆ ವೇದಿಕೆ ಮತ್ತು ಬ್ಯಾಂಕಿಂಗ್ ಓಂಬುಡ್ಸ್‌ಮನ್ ನಿಯಮಗಳ ಉಲ್ಲಂಘನೆಯನ್ನೇ ಪ್ರಮುಖವಾಗಿ ಪರಿಗಣಿಸಿ ದೂರುದಾರರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಟಿಎಂ ನಿಯಮಗಳು

ಎಟಿಎಂ ನಿಯಮಾವಳಿಗಳಂತೆ ಡೆಬಿಟ್ ಕಾರ್ಡ್ ಮತ್ತು ಪಿನ್ ಅನ್ನು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವಂತಿಲ್ಲ ಎನ್ನುವುದನ್ನು ಕಾನೂನು ತಜ್ಞರೂ ಒಪ್ಪಿಕೊಳ್ಳುತ್ತಾರೆ. ‘‘ಡೆಬಿಟ್ ಕಾರ್ಡ್ ಅದನ್ನು ನೀಡಲಾಗಿರುವ ವ್ಯಕ್ತಿಯ ವಶದಲ್ಲಿಯೇ ಇರಬೇಕು ಮತ್ತು ಬೇರೆ ಯಾರಿಗೂ ಅದನ್ನು ನೀಡುವಂತಿಲ್ಲ. ಕಾರ್ಡ್‌ನ ಅನಧಿಕೃತ ಬಳಕೆಗಾಗಿ ಯಾವುದೇ ಬಾಧ್ಯತೆಯನ್ನು ಬ್ಯಾಂಕು ಹೊಂದಿರುವುದಿಲ್ಲ ಎಂಬ ಷರತ್ತಿನಡಿ ಈ ಕಾರ್ಡ್‌ನ್ನು ವಿತರಿಸಲಾಗಿದೆ. ಇದು ಸಂಪೂರ್ಣವಾಗಿ ಕಾರ್ಡ್‌ದಾರನ ಹೊಣೆಯಾಗಿದೆ’’ ಎಂದು ನಿಯಮವು ಹೇಳುತ್ತದೆ.

ಕಾನೂನು ತಜ್ಞರ ಅಭಿಪ್ರಾಯಗಳು ಮತ್ತು ಪರಿಹಾರ

ಕುಟುಂಬ ಸದಸ್ಯರಿಂದ ಕಾರ್ಡ್ ಬಳಕೆಯು ಅನುಮತಿಯಿಂದ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಸಾಬೀತು ಪಡಿಸುವುದು ಕಷ್ಟವಾಗಿರುವುದರಿಂದ ಕಾರ್ಡ್‌ದಾರನ ಕುಟುಂಬ ಸದಸ್ಯರು ಸೇರಿದಂತೆ ಇತರ ಯಾರೂ ಆತನ ಡೆಬಿಟ್ ಕಾರ್ಡ್‌ನ್ನು ಬಳಸಬಾರದು ಎನ್ನುತ್ತಾರೆ ಕಾನೂನು ತಜ್ಞ ಸಂದೀಪ ಶಾ. ಆದರೆ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ನೀಡಲಾಗಿರುವ ಕಾರ್ಡ್‌ಗಳಿಗೆ ಇದರಿಂದ ವಿನಾಯಿತಿಯಿದೆ. ಅರ್ಜಿ ಫಾರ್ಮ್‌ಗೆ ಸಹಿ ಹಾಕಿರುವ ಹೆತ್ತವರು/ಪೋಷಕರು ಅದನ್ನು ಬಳಸಬಹುದು.

ಈ ಪ್ರಕರಣದಲ್ಲಿ ವಂದನಾರಿಗೆ ಮನೆಯಿಂದ ಹೊರಬೀಳುವುದು ಅಸಾಧ್ಯವಾಗಿದ್ದಿದ್ದರೆ ಅವರಿಗೆ ತನ್ನ ಖಾತೆಯಿಂದ ಹಣವನ್ನು ಹಿಂಪಡೆಯಲು ಪತಿಗೆ ಚೆಕ್ ನೀಡುವ ಆಯ್ಕೆಯಿತ್ತು.

ಡೆಬಿಟ್ ಕಾರ್ಡ್‌ನ್ನು ನಿರ್ದಿಷ್ಟವಾಗಿ ಓರ್ವ ವ್ಯಕ್ತಿಗೆ ನೀಡಲಾಗಿದೆ ಮತ್ತು ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಬ್ಯಾಂಕಿಂಗ್ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗಾಗಿ ನಿಮ್ಮ ಪರವಾಗಿ ಎಟಿಎಮ್‌ನಿಂದ ಹಣವನ್ನು ತೆಗೆಯವಂತೆ ನಿಮ್ಮ ಪತಿ/ಪತ್ನಿ,ಹೆತ್ತವರು ಅಥವಾ ಸ್ನೇಹಿತರನ್ನು ಕೋರಲೇಬೇಡಿ. ನಿಮಗೆ ಖುದ್ದಾಗಿ ಹೋಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲದಿದ್ದರೆ ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲು ಅನುಮತಿ ಪತ್ರದೊಂದಿಗೆ ಸೆಲ್ಫ್ ಚೆಕ್ ನೀಡಿ ಎನ್ನುತ್ತಾರೆ ಬ್ಯಾಂಕ್‌ಬಜಾರ್ ಡಾಟ್ ಕಾಮ್‌ನ ಸಿಇಒ ಆದಿಲ್ ಶೆಟ್ಟಿ.

ಇನ್ನೊಂದು ಪರಿಹಾರವೂ ಇದೆ. ಕಾರ್ಡ್‌ದಾರರು ಯಾವಾಗಲೂ ತನ್ನ ಪತಿ/ಪತ್ನಿ ಅಥವಾ ತಾನು ನಂಬಿರುವ ಇತರ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಹೆಚ್ಚುವರಿ ಡೆಬಿಟ್ ಕಾರ್ಡ್‌ಗಾಗಿ ಕೋರಬೇಕು, ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಅವರು ಕಾರ್ಡ್ ಬಳಸಬಹುದಾಗಿದೆ. ಹೆಚ್ಚುವರಿ ಕಾರ್ಡ್‌ದಾರರು ಕಾರ್ಡ್ ಬಳಸಿದ್ದಾರೆ ಎನ್ನುವುದು ಕಾರ್ಡ್‌ದಾರನಿಗೆ ಗೊತ್ತಾಗಲು ಆತ ಎಸ್‌ಎಂಎಸ್ ನೋಟಿಫಿಕೇಷನ್‌ಗಾಗಿ ತನ್ನದೇ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಎನ್ನುತ್ತಾರೆ ಶಾ.

ಎಸ್‌ಬಿಐ ಡೆಬಿಟ್ ಕಾರ್ಡ್ ಪ್ರಕರಣದಂತಹ ಸಮಸ್ಯೆಗಳಿಂದ ದೂರವಿರಲು ನಿಮ್ಮ ಪತಿ/ಪತ್ನಿ ಅಥವಾ ಹೆತ್ತವರೊಂದಿಗೆ ಜಂಟಿ ಖಾತೆಯನ್ನು ಹೊಂದಿರಬಹುದು. ಇದರಿಂದ ಅವರಿಗೂ ಡೆಬಿಟ್ ಕಾರ್ಡ್ ಬಳಸುವ ಅವಕಾಶವಿರುತ್ತದೆ ಮತ್ತು ನಿಮಗೆ ಸಾಧ್ಯವಿಲ್ಲದಿದ್ದಾಗ ನಿಮ್ಮ ಪರವಾಗಿ ಅವರು ಹಣವನ್ನು ಹಿಂಪಡೆಯಬಹುದು. ಆದರೆ ಕಾರ್ಡ್/ಪಿನ್ ಹಂಚಿಕೆ ನಿಯಮದ ಉಲ್ಲಂಘನೆಯನ್ನು ನಿವಾರಿಸಲು ಇಬ್ಬರೂ ಖಾತೆದಾರರು ಪ್ರತ್ಯೇಕ ಡೆಬಿಟ್ ಕಾರ್ಡ್‌ಗಳನನ್ನು ಹೊಂದಿರಬೇಕು. ಇನ್ನೊಂದು ಆಯ್ಕೆಯೂ ಇದೆ. ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ‘ಆಗಾಗ್ಗೆ ಉತ್ತರಿಸಲಾಗಿರುವ ಪ್ರಶ್ನೆಗಳು(ಎಫ್‌ಎಕ್ಯೂ)’ ವಿಭಾಗದಲ್ಲಿ ನೀಡಿರುವ ಮಾಹಿತಿಯಂತೆ ಪತಿ/ಪತ್ನಿ ಜಂಟಿ ಖಾತೆದಾರರಾಗಿದ್ದರೆ ಪ್ರತ್ಯೇಕ ಪಿನ್ ಅಗತ್ಯವಿಲ್ಲ ಮತ್ತು ಜಂಟಿ ಖಾತೆದಾರ ಕಾರ್ಡ್‌ನ್ನು ಬಳಸಿದರೆ ಅದು ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಶಾ ಬೆಟ್ಟು ಮಾಡಿದ್ದಾರೆ.

ಪತಿ/ಪತ್ನಿ ಜಂಟಿ ಖಾತೆದಾರರಲ್ಲದಿದ್ದರೆ ಮತ್ತು ಪ್ರತ್ಯೇಕ ಡೆಬಿಟ್ ಕಾರ್ಡ್ ಹೊಂದಿಲ್ಲದಿದ್ದರೆ ಮಾಡಬಹುದಾದ ಉತ್ತಮ ಕೆಲಸವೆಂದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಆನ್‌ಲೈನ್ ಮೂಲಕ ನಿಮ್ಮ ಪತಿ/ಪತ್ನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಮತ್ತು ಬಳಿಕ ನಿಮ್ಮ ಪತಿ/ಪತ್ನಿ ತಮ್ಮ ಸ್ವಂತ ಕಾರ್ಡ್‌ನಿಂದ ಹಣವನ್ನು ಹಿಂಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News